ADVERTISEMENT

ವಿಮಾನ ಟಿಕೆಟ್‌ ರದ್ದು ಶುಲ್ಕ ಮಿತಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 19:45 IST
Last Updated 14 ಮಾರ್ಚ್ 2020, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ಟಿಕೆಟ್‌ ರದ್ದು ಶುಲ್ಕವನ್ನು ಮೂಲದರದ ಶೇ 50ರಷ್ಟು ಮೀರದಂತೆ ನಿಗದಿಗೊಳಿಸಲು ವಿಮಾನಯಾನ ಸಂಸ್ಥೆಗಳಿಗೆ ಸೂಚನೆ ನೀಡಬೇಕು’ ಎಂದು ನಾಗರಿಕ ವಿಮಾನಯಾನ ಕುರಿತ ಸಂಸದೀಯ ಸಮಿತಿಯು ಸರ್ಕಾರಕ್ಕೆ ಸಲಹೆ ನೀಡಿದೆ.

ಟಿಕೆಟ್‌ ರದ್ದು ಮಾಡುವ ಗ್ರಾಹಕರಿಂದ ಸಂಸ್ಥೆಗಳು ಅತಿ ಹೆಚ್ಚು ಶುಲ್ಕ ಪಡೆಯುತ್ತಿರುವುದನ್ನು ಉಲ್ಲೇಖಿಸಿರುವ ಸಮಿತಿಯು, ಟಿಕೆಟ್‌ ರದ್ದುಪಡಿಸುವ ಗ್ರಾಹಕರಿಗೆ, ಅವರಿಂದ ಪಡೆದ ತೆರಿಗೆ ಹಾಗೂ ಇಂಧನ ಸರ್ಚಾರ್ಜ್‌ ಅನ್ನು ಸಂಪೂರ್ಣವಾಗಿ ಮರಳಿಸಬೇಕು.
ಗ್ರಾಹಕರು ನಗದು ಕೊಟ್ಟು ಟಿಕೆಟ್‌ ಪಡೆದಿದ್ದರೆ ಆಯಾ ಕಚೇರಿಯಿಂದ ಕೂಡಲೇ ಅವರಿಗೆ ಹಣವನ್ನು ಮರಳಿಸಬೇಕು. ಟ್ರಾವೆಲ್‌ ಏಜೆಂಟರ ಮೂಲಕ ಕಾಯ್ದಿರಿಸಿದ್ದಾದರೆ, ರದ್ದುಪಡಿಸಿ 30 ದಿನದೊಳಗಾಗಿ ಹಣವನ್ನು ಮರಳಿಸಬೇಕು ಎಂದು ಸಲಹೆ ನೀಡಿದೆ.

ವಿಮಾನ ನಿಲ್ದಾಣ ಅಭಿವೃದ್ಧಿ ಶುಲ್ಕ, ಪ್ರಯಾಣಿಕರ ಸೇವಾ ಶುಲ್ಕ ಮುಂತಾದವುಗಳನ್ನು ವಿಧಿಸಿದ್ದರೆ ಅದನ್ನೂ ಮರಳಿಸಬೇಕು ಎಂದು ರಾಜ್ಯಸಭೆ ಸದಸ್ಯ ಟಿ.ಜಿ. ವೆಂಕಟೇಶ್‌ ಅಧ್ಯಕ್ಷತೆಯ ಸಮಿತಿ ಹೇಳಿದೆ.

ADVERTISEMENT

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವಾಲಯದ ಕಾರ್ಯದರ್ಶಿಯು, ‘ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ಈ ವಿಚಾರವಾಗಿ ಯಾವುದೇ ನಿರ್ದೇಶನಗಳನ್ನು ನೀಡುವ ಅಧಿಕಾರ ಸಚಿವಾಲಯಕ್ಕೆ ಇಲ್ಲ. ಆದರೂ ಸಂಸ್ಥೆಗಳ ಪ್ರತಿನಿಧಿಗಳ ಸಭೆ ಆಯೋಜಿಸಿ ಈ ಬಗ್ಗೆ ಚಿಂತನೆ ನಡೆಸುವಂತೆ ಮನವಿ ಮಾಡಲಾಗುವುದು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.