ADVERTISEMENT

ಗಾಲಿ ಕುರ್ಚಿ ನೀಡದ ಏರ್ ಇಂಡಿಯಾ: ಅಂಗವಿಕಲ ವೈದ್ಯೆಗೆ ಪರಿಹಾರ ನೀಡುವಂತೆ ಆದೇಶ

ಇನ್‌ಸ್ಪೆಕ್ಟರ್‌ ವಿರುದ್ಧವೂ ಕ್ರಮಕ್ಕೆ ಹೈಕೋರ್ಟ್ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2019, 6:43 IST
Last Updated 2 ನವೆಂಬರ್ 2019, 6:43 IST
   

ಬೆಂಗಳೂರು: ವಿದೇಶ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಅಂಗವಿಕಲ ದಂತ ವೈದ್ಯೆಯೊಬ್ಬರಿಗೆ ಗಾಲಿ ಕುರ್ಚಿ (ವೀಲ್ ಚೇರ್) ಒದಗಿಸದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಮತ್ತು ಅವರ ತಾಯಿಗೆ ₹ 20 ಲಕ್ಷ ಪಾವತಿಸುವಂತೆ ಏರ್ ಇಂಡಿಯಾ ಲಿಮಿಟೆಡ್‌ಗೆ ಹೈಕೋರ್ಟ್ ಆದೇಶಿಸಿದೆ.

‘ವೀಲ್ ಚೇರ್ ಒದಗಿಸದೆ ದೈಹಿಕ ಹಾಗೂ ಮಾನಸಿಕ ತೊಂದರೆ ಅನುಭವಿಸುವಂತೆ ಮಾಡಲಾಗಿದ್ದು, ಅದಕ್ಕಾಗಿ ತಮಗೆ ಪರಿಹಾರ ನೀಡಲು ಏರ್ ಇಂಡಿಯಾ ಲಿಮಿಟೆಡ್‌ಗೆ ನಿರ್ದೇಶಿಸಬೇಕು’ ಎಂದು ಕೋರಿ ಡಾ. ಎಸ್.ಜೆ.ರಾಜಲಕ್ಷ್ಮಿ ಮತ್ತು ಅವರ ತಾಯಿ ಡಾ.ಎಸ್.ಶೋಭಾ ಸಲ್ಲಿಸಿದ್ದ ಅರ್ಜಿ ವಿಲೇವಾರಿ ಮಾಡಿರುವ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಈ ಆದೇಶ ಹೊರಡಿಸಿದ್ದಾರೆ.

‘ಆದೇಶದ ಪ್ರತಿ ದೊರೆತ ಎಂಟು ವಾರಗಳಲ್ಲಿ ಅರ್ಜಿದಾರರಿಬ್ಬರಿಗೂ ತಲಾ ₹ 10 ಲಕ್ಷ ಪಾವತಿ ಮಾಡಬೇಕು’ ಎಂದು ಏರ್ ಇಂಡಿಯಾ ಲಿಮಿಟೆಡ್‌ ಕಂಪನಿಗೆ ನ್ಯಾಯಪೀಠ ಆದೇಶಿಸಿದೆ.

ADVERTISEMENT

‘ಪ್ರಕರಣದ ಕುರಿತು ಅರ್ಜಿದಾರರು ನೀಡಿದ ಮಾಹಿತಿ ಆಧರಿಸಿ ಪ್ರಕರಣ ದಾಖಲಿಸದೆ ನಿರ್ಲಕ್ಷ್ಯ ತೋರಿದ ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ವಿರುದ್ಧವೂ ಸೂಕ್ತ ಕ್ರಮ ಜರುಗಿಸಬೇಕು’ ಎಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಗೆ ನ್ಯಾಯಪೀಠ ನಿರ್ದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.