ADVERTISEMENT

ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ನ್ಯಾಯಾಂಗ ಬಂಧನ ಏಪ್ರಿಲ್ 22ರವರೆಗೆ ವಿಸ್ತರಣೆ

ಪಿಟಿಐ
Published 18 ಏಪ್ರಿಲ್ 2022, 11:08 IST
Last Updated 18 ಏಪ್ರಿಲ್ 2022, 11:08 IST
ನವಾಬ್ ಮಲಿಕ್ (ಪಿಟಿಐ ಸಂಗ್ರಹ ಚಿತ್ರ)
ನವಾಬ್ ಮಲಿಕ್ (ಪಿಟಿಐ ಸಂಗ್ರಹ ಚಿತ್ರ)   

ಮುಂಬೈ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಪಿ ಮುಖಂಡ, ಮಹಾರಾಷ್ಟ್ರದ ಸಚಿವ ನವಾಬ್‌ ಮಲಿಕ್‌ ಅವರಿಗೆ ವಿಧಿಸಲಾಗಿರುವ ನ್ಯಾಯಾಂಗ ಬಂಧನದ ಅವಧಿಯನ್ನು ವಿಶೇಷ ನ್ಯಾಯಾಲಯ ಏಪ್ರಿಲ್ 22ರವರೆಗೆ ವಿಸ್ತರಣೆ ಮಾಡಿದೆ.

ಆನಾರೋಗ್ಯದ ಕಾರಣ ನೀಡಿದರೂ ನ್ಯಾಯಾಲಯ ವಿನಾಯಿತಿ ನೀಡಿಲ್ಲ.

ಮಲಿಕ್ ಅವರನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಆರ್‌.ಎನ್. ರೋಕಡೆ ಅವರ ಮುಂದೆ ಸೋಮವಾರ ಹಾಜರುಪಡಿಸಲಾಯಿತು.

ADVERTISEMENT

ಕಟಕಟೆಗೆ ತೆರಳಿದ ಸಚಿವರು, ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವುದಾಗಿಯೂ ಕಾಲುಗಳಲ್ಲಿ ಊತದ ಸಮಸ್ಯೆ ಇದೆ ಎಂದೂ ತಿಳಿಸಿದರು. ಕಾಲುನೋವಿನ ಬಗ್ಗೆ ಜೈಲು ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ ಕೇವಲ ನೋವು ನಿವಾರಕಗಳನ್ನು ನೀಡಿದ್ದಾರೆ. ಆರೋಗ್ಯ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕಿದೆ ಎಂದು ಅವರು ಹೇಳಿದರು.

ಬಂಧನ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿರುವ ಅರ್ಜಿಯು ಏಪ್ರಿಲ್ 22ಕ್ಕೆ ವಿಚಾರಣೆಗೆ ಬರುವ ನಿರೀಕ್ಷೆ ಇದೆ ಎಂದು ಮಲಿಕ್ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. ಬಳಿಕ ನ್ಯಾಯಾಧೀಶರು ಮಲಿಕ್ ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ ಮಾಡಿ ಆದೇಶ ಹೊರಡಿಸಿದರು.

ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಮತ್ತು ಆತನ ಸಹಚರರ ಚಟುವಟಿಕೆಗಳಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ನವಾಬ್‌ ಮಲಿಕ್‌ ಅವರನ್ನು ಫೆಬ್ರುವರಿ 23ರಂದು ಜಾರಿ ನಿರ್ದೇಶನಾಲಯವು (ಇ.ಡಿ) ಬಂಧಿಸಿತ್ತು.

ತಮ್ಮ ವಿರುದ್ಧ ಇ.ಡಿ. ದಾಖಲಿಸಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಮನವಿ ಮಾಡಿ ಮತ್ತು ವಿಶೇಷ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದನ್ನು ಪ್ರಶ್ನಿಸಿ ಮಲಿಕ್ ಅವರು ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.