ADVERTISEMENT

ಕೋರ್ಟ್‌ಗಳು ಪಟ್ಟಣ ನಕ್ಷೆ ಯೋಜನೆಗಾರರಲ್ಲ; ಆಂಧ್ರಪ್ರದೇಶ ಹೈಕೋರ್ಟ್‌ಗೆ ‘ಸುಪ್ರೀಂ’

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 14:31 IST
Last Updated 28 ನವೆಂಬರ್ 2022, 14:31 IST
ಸುಪ್ರೀಂ ಕೋರ್ಟ್‌ 
ಸುಪ್ರೀಂ ಕೋರ್ಟ್‌    

ನವದೆಹಲಿ: ಅಮರಾವತಿಯನ್ನು ಮಾತ್ರವೇ ಆಂಧ್ರಪ್ರದೇಶದ ರಾಜಧಾನಿಯನ್ನಾಗಿ ರೂಪಿಸಬೇಕು ಎಂದು ಆಂಧ್ರಪ್ರದೇಶ ಹೈಕೋರ್ಟ್‌ ಹೊರಡಿಸಿದ್ದ ಆದೇಶವನ್ನು ಸುಪ್ರೀಂ ಕೋರ್ಟ್‌ ಸೋಮವಾರ ತಡೆಹಿಡಿದಿದೆ. ಪಟ್ಟಣ ನಕ್ಷೆ ಯೋಜನೆಗಾರರ ಕೆಲಸ ಮಾಡಲು ಕೋರ್ಟ್‌ಗಳಿಗೆ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಮುಂದಿನ ಆರು ತಿಂಗಳ ಒಳಗೆ ಅಮರಾವತಿಯನ್ನು ರಾಜ್ಯದ ರಾಜಧಾನಿ ಮತ್ತು ರಾಜಧಾನಿ ವಲಯವನ್ನಾಗಿ ರೂಪಿಸಿವಂತೆ ಹೈಕೋರ್ಟ್‌ ಆಂಧ್ರಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಇದಕ್ಕೆ ನ್ಯಾಯಮೂರ್ತಿಗಳಾದ ಕೆ.ಎಂ. ಜೋಸೆಫ್‌ ಮತ್ತು ಬಿ.ವಿ. ನಾಗರತ್ನ ಅವರಿದ್ದ ಪೀಠವು ತಡೆ ನೀಡಿದೆ. ಸಂಪೂರ್ಣ ನಗರವನ್ನು ಆರು ತಿಂಗಳ ಒಳಗೆ ರೂಪಿಸುವಂತೆ ಗಡುವು ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದೆ. ಜೊತೆಗೆ,ಹೈಕೋರ್ಟ್‌ ಆದೇಶ ಪ್ರಶ್ನಿಸಿ ಆಂಧ್ರಪ್ರದೇಶ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಕುರಿತು ಪ್ರತಿಕ್ರಿಯೆ ನೀಡಲು ಕೇಂದ್ರ ಸರ್ಕಾರ ಮತ್ತು ರೈತ ಸಂಘಟನೆಗಳಿಗೆ ಸುಪ್ರೀಂ ಕೋರ್ಟ್‌ ನೋಟಿಸ್‌ ನೀಡಿದೆ.

ರಾಜ್ಯದ ಮೂರು ನಗರಗಳನ್ನು ರಾಜಧಾನಿಗಳನ್ನಾಗಿ ರೂಪಿಸುವ ನಿರ್ಧಾರದಿಂದ ರಾಜ್ಯ ಸರ್ಕಾರವು ಈಗಾಗಲೇ ಹಿಂದೆ ಸರಿದಿದೆ ಎಂದು ಸರ್ಕಾರದ ಪರವಾಗಿ ಕೋರ್ಟ್‌ನಲ್ಲಿ ಹಾಜರಿದ್ದ ಹಿರಿಯ ವಕೀಲ ಕೆ.ಕೆ. ವೇಣುಗೋಪಾಲ್ ಅವರು ಪೀಠಕ್ಕೆ ತಿಳಿಸಿದರು.

ADVERTISEMENT

ಈ ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಬೇಕು ಮತ್ತು ರಾಜ್ಯ ಸರ್ಕಾರ, ರೈತ ಸಂಘಟನೆಗಳು ಸಲ್ಲಿಸಿರುವ ಅರ್ಜಿಗಳ ಪರಿಶೀಲನೆ ನಡೆಸಬೇಕು ಎಂದಿರುವ ಸುಪ್ರೀಂ ಕೋರ್ಟ್‌, ಆಂಧ್ರಪ್ರದೇಶ ಸಲ್ಲಿಸಿರುವ ಮೇಲ್ಮನವಿಯ ಮುಂದಿನ ವಿಚಾರಣೆಯನ್ನು ಜನವರಿ 31ಕ್ಕೆ ನಿಗದಿಪಡಿಸಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.