ನವದೆಹಲಿ: ‘ಸಂಸತ್ತಿನಲ್ಲಿ ಅಂಗೀಕೃತವಾದ ಶಾಸನಗಳಲ್ಲಿ ಗಮನಾರ್ಹ ಲೋಪಗಳು ಕಾಣಿಸದ ಹೊರತು ನ್ಯಾಯಾಲಯ ಮಧ್ಯಪ್ರವೇಶ ಮಾಡುವಂತಿಲ್ಲ ಎಂಬ ಅಭಿಪ್ರಾಯ ಜನರಲ್ಲಿದೆ’ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಹೇಳಿದ್ದಾರೆ.
ವಕ್ಫ್ (ತಿದ್ದುಪಡಿ) ಕಾಯ್ದೆ–2025ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿಗಳು ಈ ಮಾತು ಹೇಳಿದರು.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ‘ಈ ಕಾಯ್ದೆ ವಕ್ಫ್ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳುವ ಗುರಿ ಹೊಂದಿದೆ’ ಎಂದು ಪುನರುಚ್ಚರಿಸಿದರು. ಆಗ ಮುಖ್ಯ ನ್ಯಾಯಮೂರ್ತಿಗಳು, ‘ಪ್ರತಿಯೊಂದು ಶಾಸನವು ಸಂವಿಧಾನದ ಪ್ರಕಾರ ಸಂಸತ್ತಿನಲ್ಲಿ ಅನುಮೋದನೆಗೊಳ್ಳುತ್ತದೆ. ಮಧ್ಯಂತರ ಆದೇಶಕ್ಕಾಗಿ ನೀವು ಬಲವಾದ ವಾದ ಮಂಡಿಸಬೇಕು. ವಿಶೇಷವಾಗಿ ಪ್ರಸ್ತುತ ಸನ್ನಿವೇಶದಲ್ಲಿ, ನಾವು ಹೆಚ್ಚಿನದನ್ನು ಹೇಳಬೇಕಾಗಿಲ್ಲ’ ಎಂದು ಮಾರ್ಮಿಕವಾಗಿ ಹೇಳಿದರು.
ಕಪಿಲ್ ಸಿಬಲ್ ವಾದ ಮಂಡಿಸಿ ‘ನ್ಯಾಯಾಂಗೇತರ ಮಾರ್ಗಗಳ ಮೂಲಕ ವಕ್ಫ್ ಅನ್ನು ವಶಪಡಿಸಿಕೊಳ್ಳುವುದಕ್ಕೆ ಈ ಕಾನೂನು ಒಂದು ಸಾಧನ. ಈ ಪ‍್ರಕರಣದಲ್ಲಿ ಐತಿಹಾಸಿಕ ಕಾನೂನು ಹಾಗೂ ಸಾಂವಿಧಾನಿಕ ತತ್ವಗಳನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ‘ ಎಂದು ಆಕ್ಷೇಪಿಸಿದರು.
‘ಆಡಳಿತ ಮಂಡಳಿಗಳಲ್ಲಿ ಮುಸ್ಲಿಂ ಸದಸ್ಯರಿರಬೇಕು ಎಂಬ ಅಂಶ ಹಿಂದಿನ ವಕ್ಫ್ ಕಾಯ್ದೆಗಳಲ್ಲಿತ್ತು. 2025ರ ಕಾಯ್ದೆಯಲ್ಲಿ ಅದರ ಬಗ್ಗೆ ಯಾವುದೇ ಉಲ್ಲೇಖವಿಲ್ಲ’ ಎಂಬ ಅಂಶವನ್ನು ಅವರು ಪೀಠದ ಗಮನಕ್ಕೆ ತಂದರು.
‘2025ರ ಕಾಯ್ದೆಯು ನ್ಯಾಯಾಂಗ ಪ್ರಕ್ರಿಯೆಯನ್ನು ಮೀರಿ, ಕಾರ್ಯಾಂಗದ ವಿಧಾನಗಳ ಮೂಲಕ ವಕ್ಫ್ ಆಸ್ತಿಗಳನ್ನು ವ್ಯವಸ್ಥಿತವಾಗಿ ಸ್ವಾಧೀನಪಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಮೇಲಾಗಿ, ವಕ್ಫ್ ಆಸ್ತಿಗಳು ವಕ್ಫ್ ಅಲ್ಲದ ಆಸ್ತಿಗಳಾಗಬಹುದು. ಹಿಂದಿನ ಶಾಸನಗಳು ಆಸ್ತಿಗಳನ್ನು ರಕ್ಷಿಸುತ್ತಿದ್ದವು ಮತ್ತು ಈಗಿನ ಕಾಯ್ದೆಯು ಅವುಗಳನ್ನು ಕಸಿದುಕೊಳ್ಳುವ ಉದ್ದೇಶ ಹೊಂದಿದೆ’ ಎಂದು ದೂರಿದರು.
‘ಈ ಕಾಯ್ದೆ ವಕ್ಫ್ ಆಸ್ತಿಗಳನ್ನು ನಿಧಾನವಾಗಿ ಸ್ವಾಧೀನಪಡಿಸಿಕೊಳ್ಳಲು ಅವಕಾಶ ನೀಡುತ್ತದೆ. ಇಸ್ಲಾಮಿಕ್ ಕಾನೂನಿನ ಅಡಿಯಲ್ಲಿರುವ ಧಾರ್ಮಿಕ ಅಥವಾ ದತ್ತಿ ಉದ್ದೇಶಗಳ ಶಾಶ್ವತ ದತ್ತಿಯಾದ ವಕ್ಫ್ ಪರಿಕಲ್ಪನೆಯನ್ನೇ ದುರ್ಬಲಗೊಳಿಸುತ್ತದೆ’ ಎಂದು ಸಿಬಲ್ ಹೇಳಿದರು.
ಕಾಯ್ದೆಯ ಸೆಕ್ಷನ್ 3ಸಿ ಅನ್ನು ಉಲ್ಲೇಖಿಸಿದ ಅವರು, ಆಸ್ತಿಯು ಸರ್ಕಾರಕ್ಕೆ ಸೇರಿದ ಭೂಮಿಯೇ ಎಂಬುದರ ಕುರಿತು ತನಿಖೆ ನಡೆಸಲು ಅಧಿಕೃತ ಅಧಿಕಾರಿಗೆ ಇದು ಅವಕಾಶ ಕಲ್ಪಿಸುತ್ತದೆ’ ಎಂದರು.
ಕಾಯ್ದೆಯ ಸೆಕ್ಷನ್ 9 ಮತ್ತು 14 ಅನ್ನು ಉಲ್ಲೇಖಿಸಿದ ಅವರು, ‘ಈ ಸೆಕ್ಷನ್‌ಗಳು ಕೇಂದ್ರ ಮತ್ತು ರಾಜ್ಯ ವಕ್ಫ್ ಮಂಡಳಿಗಳ ಸಂಯೋಜನೆ ಬದಲಾಯಿಸಲು ಅನುವು ಮಾಡಿಕೊಡುತ್ತವೆ. ಮಂಡಳಿಗಳಲ್ಲಿ ಮುಸ್ಲಿಮೇತರರೇ ಹೆಚ್ಚಿನ ಸಂಖ್ಯೆಯಲ್ಲಿ ಇರಲಿದ್ದಾರೆ. ಇದು ಸಮುದಾಯದ ನಿಯಂತ್ರಣವನ್ನು ದುರ್ಬಲಗೊಳಿಸುವ ಪ್ರಯತ್ನ. ಸೆಕ್ಷನ್ 23 ಪ್ರಕಾರ, ವಕ್ಫ್ ಮಂಡಳಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನಾಗಿ ಮುಸ್ಲಿಮೇತರರನ್ನು ನೇಮಕ ಮಾಡಲು ಅವಕಾಶವಿದೆ. ಇತರ ಧರ್ಮದವರನ್ನು ವಕ್ಫ್ ಆಡಳಿತದ ಭಾಗವಾಗಲು ಅವಕಾಶ ನೀಡುವುದು ಸರಿಯಲ್ಲ’ ಎಂದು ವಾದಿಸಿದರು.
ಮತ್ತೊಬ್ಬ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ರಾಜೀವ್ ಧವನ್, ‘ಈ ಕಾಯ್ದೆಯು ಜಾತ್ಯತೀತತೆ ಮತ್ತು ಸಾಂಸ್ಕೃತಿಕ ಸ್ವಾಯತ್ತತೆಯ ಮೇಲಿನ ದಾಳಿ’ ಎಂದು ಹೇಳಿದರು.
‘2013ರಿಂದ ವಕ್ಫ್ ಆಸ್ತಿಯ ಪ್ರಮಾಣದಲ್ಲಿ ಶೇ 116ರಷ್ಟು ಹೆಚ್ಚಳ ಕಂಡುಬಂದಿದೆ’ ಎಂಬ ಕೇಂದ್ರ ಸರ್ಕಾರದ ಪ್ರಮಾಣಪತ್ರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿಂಘ್ವಿ, ‘ಆಸ್ತಿಗಳ ಡಿಜಿಟಲೀಕರಣದಿಂದ ಈ ಏರಿಕೆ ಕಂಡುಬಂದಿದೆ. ಹೊಸದಾಗಿ ಯಾವುದೇ ಆಸ್ತಿಗಳ ಸ್ವಾಧೀನ ಆಗಿಲ್ಲ’ ಎಂದರು.
‘ದೇಶದಲ್ಲಿ ಒಟ್ಟು 8.72 ಲಕ್ಷ ವಕ್ಫ್ ಆಸ್ತಿಗಳಿವೆ. ಅದರಲ್ಲಿ 4 ಲಕ್ಷಕ್ಕೂ ಹೆಚ್ಚು ವಕ್ಫ್‌ಗಳು ಬಳಕೆದಾರರ ವಕ್ಫ್‌ಗಳಾಗಿವೆ’ ಎಂದು ಅವರು ವಿವರಿಸಿದರು. ಜಂಟಿ ಸಂಸದೀಯ ಸಮಿತಿಯ ವರದಿಯ ಪ್ರಕಾರ, 28 ರಾಜ್ಯಗಳ ಪೈಕಿ ಐದರಲ್ಲಿ ಮತ್ತು 4 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಾತ್ರ ವಕ್ಫ್ ಆಸ್ತಿಗಳ ಸಮೀಕ್ಷೆ ನಡೆಸಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.