ADVERTISEMENT

‘ಕೋವ್ಯಾಕ್ಸಿನ್‌: ಡೆಲ್ಟಾ ತಳಿ ವಿರುದ್ಧ ಶೇ.65ರಷ್ಟು ಪರಿಣಾಮಕಾರಿ’

​ಪ್ರಜಾವಾಣಿ ವಾರ್ತೆ
Published 3 ಜುಲೈ 2021, 17:26 IST
Last Updated 3 ಜುಲೈ 2021, 17:26 IST
   

ಹೈದರಾಬಾದ್‌: ಕೊರೊನಾ ವೈರಸ್‌ನ ಡೆಲ್ಟಾ ರೂಪಾಂತರ ತಳಿಯ ವಿರುದ್ಧ ಕೋವ್ಯಾಕ್ಸಿನ್‌ ಲಸಿಕೆ ಶೇ 65ರಷ್ಟು ಪರಿಣಾಮಕಾರಿಯಾಗಿದೆ ಎಂದು ಭಾರತ್‌ ಬಯೋಟೆಕ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ ಸಂಸ್ಥೆ ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಶನಿವಾರ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

ಕೋವ್ಯಾಕ್ಸಿನ್‌, ಕೋವಿಡ್‌–19 ವಿರುದ್ಧ ಶೇ 77.8ರಷ್ಟು ಹಾಗೂ ತೀವ್ರ ಸ್ವರೂಪದ ಸೋಂಕಿನ ವಿರುದ್ಧ ಶೇ 93.4ರಷ್ಟು ಪರಿಣಾಮಕಾರಿಯಾಗಿದೆ. ಲಕ್ಷಣ ರಹಿತ ಸೋಂಕಿನ ವಿರುದ್ಧ ಶೇ 63.6ರಷ್ಟು ರಕ್ಷಣೆ ನೀಡುತ್ತದೆ ಎಂದು ಸಂಸ್ಥೆ ಹೇಳಿದೆ. ಮೂರನೇ ಹಂತದ ಪ್ರಯೋಗದ ಫಲಿತಾಂಶವನ್ನು ಉಲ್ಲೇಖಿಸಿ, ಸಂಸ್ಥೆಯು ಈ ಮಾಹಿತಿ ನೀಡಿದೆ.

ಕ್ಯುಪಿಸಿಆರ್‌ ಪರೀಕ್ಷೆ ಪ್ರಕಾರ, ಲಕ್ಷಣ ರಹಿತ ಕೊರೊನಾ ಸೋಂಕಿನ ವಿರುದ್ಧ ಉತ್ತಮ ಪರಿಣಾಮದ ಭರವಸೆ ನೀಡಿರುವ ಪ್ರಥಮ ಲಸಿಕೆ ಇದಾಗಿದೆ ಎಂದು ಸಂಸ್ಥೆ ಹೇಳಿದೆ.

ADVERTISEMENT

ಕೊರೊನಾ ವೈರಸ್‌ನ ಎಲ್ಲಾ ತಳಿಗಳ ವಿರುದ್ಧ ಕೋವ್ಯಾಕ್ಸಿನ್‌ ಪರಿಣಾಮಕಾರಿಯಾಗಿದೆ. ಈ ಲಸಿಕೆಯ ಯಶಸ್ಸು, ‘ಸಂಶೋಧನೆ ಹಾಗೂ ಉದ್ಯಮ ವಲಯದಲ್ಲಿ ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಸ್ಥಾನ ಸಿಗುವಂತೆ ಮಾಡಿದೆ’ ಎಂದು ಐಸಿಎಂಆರ್‌ನ ಆರೋಗ್ಯ ಸಂಶೋಧನಾ ಕಾರ್ಯದರ್ಶಿ ಮತ್ತು ಮಹಾನಿರ್ದೇಶಕ ಪ್ರೊ. ಬಲರಾಮ್‌ ಭಾರ್ಗವ ಹೇಳಿದ್ದಾರೆ.

ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಕೋವ್ಯಾಕ್ಸಿನ್‌ ಲಸಿಕೆ ಅಭಿವೃದ್ಧಿಪಡಿಸಿದ 6 ತಿಂಗಳ ಬಳಿಕ, ಬಹು ನಿರೀಕ್ಷಿತ ಮೂರನೇ ಹಂತದ ಪ್ರಯೋಗದ ಫಲಿತಾಂಶ ಹೊರಬಿದ್ದಿದೆ. ಮೂರನೇ ಹಂತದ ವೈದ್ಯಕೀಯ ಪ್ರಯೋಗ 2020ರ ನವೆಂಬರ್‌ನಿಂದ 2021ರ ಫೆಬ್ರುವರಿ ವರಗೆ ನಡೆಸಲಾಗಿದೆ. ದೇಶದಾದ್ಯಂತ 25,800ಕ್ಕೂ ಹೆಚ್ಚು ಸ್ವಯಂಸೇವಕರ ಮೇಲೆ ಲಸಿಕೆ ಪ್ರಯೋಗ ಮಾಡಲಾಗಿದೆ. ಎರಡನೇ ಡೋಸ್ ಲಸಿಕೆ ಪಡೆದ ಬಳಿಕ ಕೊರೊನಾ ಸೋಂಕಿಗೆ ಒಳಗಾದ 130 ಜನರ ಮೇಲೂ ಪ್ರಯೋಗ ನಡೆಸಲಾಗಿದೆ. ಈ ಎಲ್ಲಾ ಪ್ರಯೋಗಗಳ ಆಧಾರದ ಮೇಲೆ ಲಸಿಕೆಯ ಪರಿಣಾಮದ ಕುರಿತು ಭರವಸೆ ನೀಡಲಾಗಿದೆ. ಭಾರತದಲ್ಲಿ ಬೇರೆ ಯಾವುದೇ ಲಸಿಕೆಯ ಮೂರನೇ ಹಂತದ ಪ್ರಯೋಗ ಇಷ್ಟು ದೊಡ್ಡ ಮಟ್ಟದಲ್ಲಿ ನಡೆದಿಲ್ಲ ಎಂದು ಹೇಳಿದೆ.

ಬೂಸ್ಟರ್‌ ಡೋಸ್‌ ಪ್ರಾಯೋಗಿಕ ಪರೀಕ್ಷೆ: ಕೋವ್ಯಾಕ್ಸಿನ್‌ ಬೂಸ್ಟರ್‌ ಡೋಸ್‌ ಎಷ್ಟು ಸುರಕ್ಷಿತ ಮತ್ತು ಎಷ್ಟು ಪ್ರಮಾಣದಲ್ಲಿ ರೋಗನಿರೋಧಕ ಗುಣ ಹೊಂದಿವೆ ಎಂಬುದರ ಕುರಿತು ಪ್ರಾಯೋಗಿಕ ಪರೀಕ್ಷೆ ಪ್ರಗತಿಯಲ್ಲಿರುವುದಾಗಿ ಭಾರತ್‌ ಬಯೋಟೆಕ್ ಸಂಸ್ಥೆ ಹೇಳಿದೆ.

ತೀವ್ರ ಆತಂಕಕ್ಕೀಡುಮಾಡುವಕೊರೊನಾ ವೈರಸ್‌ ತಳಿಗಳ ವಿರುದ್ಧ ಬೂಸ್ಟರ್‌ ಡೋಸ್‌ ಹೇಗೆ ಹೋರಾಡುತ್ತದೆ ಎಂಬ ಕುರಿತು ಸಂಶೋಧನೆಗಳನ್ನು ನಡೆಸಲಾಗುತ್ತಿದೆ. ಜೊತೆಗೆ, 2ರಿಂದ 18 ವರ್ಷ ವಯಸ್ಸಿನ ಮಕ್ಕಳು ಹಾಗೂ ಹದಿಹರೆಯದವರಿಗೆ ನೀಡಬೇಕಿರುವ ಲಸಿಕೆಯ ವೈದ್ಯಕೀಯ ಪ್ರಯೋಗ ಜೂನ್‌ನಿಂದ ಚಾಲ್ತಿಯಲ್ಲಿದ್ದು, 525 ಸ್ವಯಂಸೇವಕರ ಮೇಲೆ ಈ ಲಸಿಕೆ ಪ್ರಯೋಗಿಸಲಾಗಿದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.