ADVERTISEMENT

ಕೋವಿಡ್‌ ಬಿಕ್ಕಟ್ಟು ದಿಟ್ಟ ನಿರ್ಧಾರ ತಳೆಯಲು ದೊರೆತ ಸದವಕಾಶ -ನರೇಂದ್ರ ಮೋದಿ

ಪಿಟಿಐ
Published 11 ಜೂನ್ 2020, 10:43 IST
Last Updated 11 ಜೂನ್ 2020, 10:43 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಕೋಲ್ಕತ್ತ: ಕೋವಿಡ್‌–19ನಿಂದ ಉದ್ಭವಿಸಿರುವ ಬಿಕ್ಕಟ್ಟು ‘ಆತ್ಮನಿರ್ಭರ ಭಾರತ’ ನಿರ್ಮಿಸಲು ದೊರೆತಿರುವ ಸದವಕಾಶ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ದಿಟ್ಟ ನಿರ್ಧಾರ ಮತ್ತು ಹೂಡಿಕೆ ಕುರಿತು ಸ್ಪಷ್ಟ ನಿಲುವು ತಳೆಯಲು ಇದು ಸಕಾಲ ಎಂದು ಅವರು ಗುರುವಾರ ಅಭಿಪ್ರಾಯಪಟ್ಟರು.

ಕೋಲ್ಕತ್ತದಲ್ಲಿ ನಡೆಯುತ್ತಿರುವ ಭಾರತೀಯ ವಾಣಿಜ್ಯ ಸಂಸ್ಥೆಯ 95ನೇ ಸಮಾವೇಶದಲ್ಲಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಅವರು, ವಿದೇಶಗಳಿಂದ ಆಮದು ಮಾಡಿಕೊಳ್ಳುವ ಉತ್ಪನ್ನಗಳು ಭಾರತದಲ್ಲಿಯೇ ತಯಾರಾಗುವಂತೆ ನಾವು ಕ್ರಮವಹಿಸಬೇಕು ಎಂದು ಹೇಳಿದರು.

ADVERTISEMENT

‘ಸ್ವಾವಲಂಬಿಯಾಗುವ ಭಾರತದ ಗುರಿ ಸಾಧನೆಯ ಹೆಜ್ಜೆಗಳು ಕಳೆದ ಐದು ವರ್ಷಗಳಲ್ಲಿ ಕೃತಿ ಮತ್ತು ನೀತಿಗಳಲ್ಲಿ ವ್ಯಕ್ತವಾಗಿವೆ. ಕೋವಿಡ್‌–19 ಬಿಕ್ಕಟ್ಟು ನಮ್ಮ ಕಾರ್ಯನೀತಿಗಳನ್ನು ಸರಿಯಾದ ದಿಕ್ಕಿನಲ್ಲಿ ಹೋಗುವಂತೆ ಹೇಗೆ ಚುರುಕುಗೊಳಿಸಬೇಕು ಎಂದು ತಿಳಿಯಲು ಒಂದು ಪಾಠವಾಗಿದೆ’ ಎಂದರು.

‘ಇದು, ಸಾಂಪ್ರದಾಯಿಕ ಶೈಲಿಯಲ್ಲಿ ಕೆಲಸ ಮಾಡುವ ಕಾಲವಲ್ಲ. ದಿಟ್ಟವಾದ ನಿರ್ಧಾರ ಮತ್ತು ಹೂಡಿಕೆ ಕೈಗೊಳ್ಳಲು ಕಾಲ. ಹಾಗೆಯೇ, ಪ್ರಾಬಲ್ಯ ಮತ್ತು ನಿಯಂತ್ರಣವುಳ್ಳ ಆರ್ಥಿಕತೆಗೆ ಬದಲಾಗಿ ಸ್ಪರ್ಧಾತ್ಮಕವಾದ ಜಾಗತಿಕ ಸರಣಿಯನ್ನು ರೂಪಿಸುವ ಕಾಲ’ ಎಂದು ಪ್ರಧಾನಿ ಹೇಳಿದರು.

ಭಾರತದ ಎದುರು ಕೋವಿಡ್‌–19 ಜೊತೆಗೆ ಇತರೆ ಹಲವು ಸವಾಲುಗಳೂ ಇವೆ. ಪ್ರವಾಹ, ಮಿಡತೆಗಳ ಹಾವಳಿ, ಭೂಕಂಪ ಹೀಗೆ. ಆದರೆ, ನಾವು ಬಿಕ್ಕಟ್ಟನ್ನು ಅವಕಾಶಗಳಾಗಿ ಪರಿವರ್ತಿಸುವ ಮೂಲಕ ಸ್ವಾವಲಂಬಿಯಾದ ಭಾರತ ನಿರ್ಮಿಸಲು ಹೆಜ್ಜೆಗಳನ್ನು ಇಡಬೇಕಾಗಿದೆ ಎಂದು ಅವರು ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.