ADVERTISEMENT

3 ದಶಕಗಳ ಬಳಿಕ ತಂದೆ ಮತ್ತು ಮಗಳು ಭೇಟಿಯಾಗಲು ಕಾರಣವಾದ ಕೋವಿಡ್

​ಪ್ರಜಾವಾಣಿ ವಾರ್ತೆ
Published 14 ಮೇ 2021, 15:19 IST
Last Updated 14 ಮೇ 2021, 15:19 IST
ಮಗಳು ಅಜಿತಾ ಮತ್ತು ತಂದೆ ಶಿವಾಜಿ
ಮಗಳು ಅಜಿತಾ ಮತ್ತು ತಂದೆ ಶಿವಾಜಿ   

ತಿರುವನಂತಪುರ: ಕೋವಿಡ್ -19 ಸಾಂಕ್ರಾಮಿಕ ರೋಗವು ಕೇರಳದ 33 ವರ್ಷದ ಮಹಿಳೆಯೊಬ್ಬರಿಗೆ 33 ವರ್ಷಗಳ ನಂತರ ಮತ್ತೆ ತನ್ನ ತಂದೆ ಭೇಟಿಗೆ ಅವಕಾಶ ಮಾಡಿಕೊಟ್ಟಿದೆ.

ಕೇರಳದ ಪಾಲಕ್ಕಾಡ್ ಮೂಲದ ಅಜಿತಾ, ಒಂದು ವರ್ಷದ ಹಿಂದೆ ತನ್ನ ತಂದೆ ಶಿವಾಜಿ ಜೀವಂತವಾಗಿದ್ದಾರೆ ಮತ್ತು ಕೊಲೆ ಪ್ರಕರಣವೊಂದರಲ್ಲಿ ತಿರುವನಂತಪುರದ ಕೇಂದ್ರ ಕಾರಾಗೃಹದಲ್ಲಿ ಜೈಲಿನಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಅಂದಿನಿಂದ, ಆಕೆ ತಂದೆಯ ಬಿಡುಗಡೆಗೆ ಪ್ರಯತ್ನ ನಡೆಸುತ್ತಿದ್ದರು.

ಆದೃಷ್ಟವಶಾತ್, ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ 65ರ ಹರೆಯದ ಶಿವಾಜಿಗೆ ಮೂರು ತಿಂಗಳ ಕಾಲ ಪೆರೋಲ್ ನೀಡಲಾಗಿದೆ. ಹೀಗಾಗಿ, ಮಗಳು ಅಜಿತಾ ಅವರ ಪತಿ ವಿ ಕೆ ರೆಂಜಿತ್ ಮತ್ತು ಮೂವರು ಮಕ್ಕಳನ್ನೊಳಗೊಂಡ ಕುಟುಂಬದ ಜೊತೆ ಶಿವಾಜಿ ಕಾಲ ಕಳೆಯುತ್ತಿದ್ದಾರೆ. ಅವರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.

ADVERTISEMENT

ಜೈಲಿನಿಂದ ಹೊರಬಂದು ತಮ್ಮ ಊರಿಗ ಬಂದ ನಂತರ ತನ್ನ ತಂದೆಆರಂಭದಲ್ಲಿ ತುಂಬಾ ಗೊಂದಲದಲ್ಲಿದ್ದರು. ಕಳೆದ ಮೂರು ದಶಕಗಳಿಂದ ಅವರು ಜೈಲಿನ ಗೋಡೆಗಳ ಮಧ್ಯೆ ಬಂಧಿಯಾಗಿದ್ದರಿಂದ ಇದು ಅವರಿಗೆ ವಿಭಿನ್ನ ಅನುಭವವಾಗಿದೆ. ಆದರೆ ಈಗ, ಅವರು ಕುಟುಂಬದ ಜೊತೆ ಆನಂದದಿಂದಿದ್ದಾರೆ ಎಂದು ಅಜಿತಾ, ಡೆಕ್ಕನ್ ಹೆರಾಲ್ಡ್‌ಗೆ ತಿಳಿಸಿದ್ದಾರೆ.

ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರಾಗಿದ್ದ ಶಿವಾಜಿಯನ್ನು ರಾಜಕೀಯ ಕೊಲೆ ಪ್ರಕರಣವೊಂದರಲ್ಲಿ ಪೊಲೀಸರು ಬಂಧಿಸಿದ್ದರು. ಅಜಿತಾ ಜನಿಸಿದ ಕೇವಲ ಒಂಬತ್ತು ದಿನಗಳ ನಂತರ ತಂದೆ ಜೈಲು ಸೇರಿದ್ದರು. ಮಾನಸಿಕ ಆಘಾತದಿಂದಾಗಿ ಅಜಿತಾಳ ತಾಯಿ ಕೆಲವು ವರ್ಷಗಳ ನಂತರ ಮೃತಪಟ್ಟಿದ್ದರು. ಹೀಗಾಗಿ, ಅಜ್ಜಿ ಮನೆಯಲ್ಲೇ ಅಜಿತಾ ಅವರು ಬೆಳೆದಿದ್ದರು.

‘ನನ್ನ ತಾಯಿಯ ಕುಟುಂಬವು ನನ್ನ ತಂದೆಯ ಬಗ್ಗೆ ಅನೇಕ ತಪ್ಪು ತಿಳುವಳಿಕೆಗಳನ್ನು ಹೊಂದಿತ್ತು, ನನ್ನ ತಂದೆ,ನನ್ನ ತಾಯಿಯನ್ನು ಮದುವೆಯಾಗಲು ಒಪ್ಪಿಕೊಂಡರೂ ಸಹ ಅವರ ಮೇಲೆ ಅಸಮಾಧಾನವಿತ್ತು. ಆದ್ದರಿಂದ, ನನ್ನ ತಾಯಿಯ ಕುಟುಂಬವು ನನ್ನ ತಂದೆಯ ಬಗ್ಗೆ ನನ್ನ ಪ್ರಶ್ನೆಗಳಿಗೆ ಯಾವುದೇ ಉತ್ತರ ನೀಡಲಿಲ್ಲ. ನನ್ನ ತಂದೆ ಜೀವಂತವಾಗಿಲ್ಲ ಎಂದು ನಂಬಿಸಿದ್ದರು’ ಎಂದು ಅಜಿತಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.