ADVERTISEMENT

ಎನ್‌ಇಪಿ ಅಗಾಧ ಆಯ್ಕೆ ಸ್ವಾತಂತ್ರ್ಯ ನೀಡುತ್ತದೆ: ಪ್ರಧಾನಿ ಮೋದಿ

‘ಶತಮಾನಕ್ಕೊಮ್ಮೆ ಕಾಣಿಸಿಕೊಳ್ಳುವ ಸಾಂಕ್ರಾಮಿಕ ಬಿಕ್ಕಟ್ಟನ್ನು ಭಾರತ ದಿಟ್ಟತನದಿಂದ ಎದುರಿಸಿದೆ’

​ಪ್ರಜಾವಾಣಿ ವಾರ್ತೆ
Published 29 ಜುಲೈ 2022, 13:52 IST
Last Updated 29 ಜುಲೈ 2022, 13:52 IST
ತಮಿಳುನಾಡಿಗೆ ಎರಡು ದಿನಗಳ ಕಾಲ ಭೇಟಿ ನೀಡಿ ವಾಪಸಾಗುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಚೆಸ್‌ಬೋರ್ಡ್‌ ಅನ್ನು ಉಡುಗೊರೆಯಾಗಿ ನೀಡಿದರು.
ತಮಿಳುನಾಡಿಗೆ ಎರಡು ದಿನಗಳ ಕಾಲ ಭೇಟಿ ನೀಡಿ ವಾಪಸಾಗುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಚೆಸ್‌ಬೋರ್ಡ್‌ ಅನ್ನು ಉಡುಗೊರೆಯಾಗಿ ನೀಡಿದರು.   

ಚೆನ್ನೈ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು (ಎನ್‌ಇಪಿ) ಯುವಜನತೆಗೆ ಅಗಾಧ ಆಯ್ಕೆಯ ಸ್ವಾತಂತ್ರ್ಯ ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿನ ಅಣ್ಣಾ ವಿಶ್ವವಿದ್ಯಾಲಯದ 42ನೇ ಘಟಿಕೋತ್ಸವದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ‘ಸರ್ಕಾರ ಜನರ ಪ್ರತಿಭೆಗೆ ಜಾಗ ನೀಡುತ್ತದೆ. ಸರ್ಕಾರವೊಂದು ಎಲ್ಲವನ್ನೂ ತಿಳಿಯಲು ಅಥವಾ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ ಎಂದು ಒಪ್ಪಿಕೊಳ್ಳುವುದರಲ್ಲಿ ಅದರ ಸಾಮರ್ಥ್ಯ ಅಡಗಿದೆ. ಇದೇ ಕಾರಣದಿಂದ ಪ್ರತಿಯೊಂದು ಕ್ಷೇತ್ರದಲ್ಲೂ ಸುಧಾರಣೆ ನೋಡುತ್ತಿದ್ದೀರಿ. ಅದೇ ರೀತಿ ನೂತನ ಶಿಕ್ಷಣ ನೀತಿಯು ಯುವಜನತೆಗೆ ಅಗಾಧ ಆಯ್ಕೆಯ ಸ್ವಾತಂತ್ರ್ಯ ನೀಡುತ್ತದೆ’ ಎಂದು ಅವರು ಹೇಳಿದರು.

ಇದೇ ವೇಳೆ, ಕೋವಿಡ್‌–19 ಹಿಂದೆಂದೂ ಕಂಡುಕೇಳರಿಯದ, ಶತಮಾನಕ್ಕೆ ಒಮ್ಮೆ ಮಾತ್ರ ಎದುರಾಗುವ ಸಾಂಕ್ರಾಮಿಕ ರೋಗ. ಈ ಸಾಂಕ್ರಾಮಿಕ ಪ್ರತಿ ದೇಶವನ್ನೂ ಪರೀಕ್ಷಿಸಿದೆ. ಈ ಆಗಂತುಕವನ್ನು ಭಾರತ ಅತ್ಯಂತ ದಿಟ್ಟತನದಿಂದ ಎದುರಿಸಿದೆ. ಅದಕ್ಕಾಗಿ ಎಲ್ಲ ವಿಜ್ಞಾನಿಗಳಿಗೆ, ಆರೋಗ್ಯ ಸಿಬ್ಬಂದಿ ಮತ್ತು ಜನಸಾಮಾನ್ಯರಿಗೆ ಧನ್ಯವಾದ. ಇದರ ಫಲಿತಾಂಶವಾಗಿ ಕೈಗಾರಿಕೆ, ಆವಿಷ್ಕಾರ, ಬಂಡವಾಳ ಅಥವಾ ಅಂತರರಾಷ್ಟ್ರೀಯ ವ್ಯಾಪಾರ ಸೇರಿದಂತೆ ದೇಶದ ಪ್ರತಿ ಕ್ಷೇತ್ರವೂ ಹೊಸ ಚೈತನ್ಯ ಪಡೆದಿದೆ. ದೇಶವು ಎಲ್ಲ ಅಡೆತಡೆಗಳನ್ನು ಅವಕಾಶವಾಗಿ ಪರಿವರ್ತಿಸಿಕೊಂಡಿದೆ’ ಎಂದು ಹೇಳಿದರು.

ADVERTISEMENT

ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರ ಎನ್‌ಇಪಿಗೆ ವಿರೋಧ ವ್ಯಕ್ತಪಡಿಸಿ, ತನ್ನದೇ ರಾಜ್ಯ ಶಿಕ್ಷಣ ನೀತಿ ಜಾರಿಗೆ ಮುಂದಾಗಿದೆ. ಈ ಮಧ್ಯೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು ಭಾಗಿಯಾದ ಸಭೆಯಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಎನ್‌ಇಪಿ ಪ್ರಶಂಸಿಸಿ ಮಾತನಾಡಿದ್ದು ಗಮನಾರ್ಹವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.