ADVERTISEMENT

ವೈದ್ಯರಿಗೂ ಕ್ವಾರಂಟೈನ್‌ ಸೌಲಭ್ಯ ನೀಡಿ: ಸುಪ್ರೀಂಕೋರ್ಟ್‌

ಪಿಟಿಐ
Published 17 ಜೂನ್ 2020, 7:42 IST
Last Updated 17 ಜೂನ್ 2020, 7:42 IST
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್   

ನವದೆಹಲಿ: ಕೋವಿಡ್‌–19 ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೂ ಕ್ವಾರಂಟೈನ್‌ ಸೌಲಭ್ಯ ನೀಡಬೇಕು ಮತ್ತು ವೇತನ ನೀಡಲು ರಾಜ್ಯಗಳಿಗೆ ಕೇಂದ್ರ ಸರ್ಕಾರ ನಿರ್ದೇಶನ ನೀಡಬೇಕು ಎಂದು ಸುಪ್ರೀಂಕೋರ್ಟ್‌ ಬುಧವಾರ ಹೇಳಿದೆ.

ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಕ್ವಾರಂಟೈನ್‌ ಸೌಲಭ್ಯವನ್ನು ನಿರಾಕರಿಸಬಾರದು ಎಂದು ನ್ಯಾಯಮೂರ್ತಿಗಳಾದ ಅಶೋಕ್‌ ಭೂಷಣ್‌, ಎಸ್‌.ಕೆ. ಕೌಲ್‌ ಮತ್ತು ಎಂ.ಆರ್‌. ಷಾ ಅವರನ್ನು ಒಳಗೊಂಡ ಪೀಠ ತಿಳಿಸಿತು.

ವೇತನ ಪಾವತಿಸಿದ ಮತ್ತು ಕ್ವಾರಂಟೈನ್‌ ಸೌಲಭ್ಯ ಒದಗಿಸಿದ ಬಗ್ಗೆ ನಾಲ್ಕು ವಾರಗಳೊಳಗೆ ವರದಿ ನೀಡಬೇಕು. ಆದೇಶ ಪಾಲಿಸದಿದ್ದರೆ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿತು.

ADVERTISEMENT

ವೈದ್ಯರು 14 ದಿನಗಳು ಕ್ವಾರಂಟೈನ್‌ನಲ್ಲಿರಬೇಕೆಂಬುದು ಕಡ್ಡಾಯವಲ್ಲ ಎಂಬ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ವೈದ್ಯರೊಬ್ಬರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಖಾಸಗಿ ಆಸ್ಪತ್ರೆಯ ವೈದ್ಯೆ ಆರುಷಿ ಜೈನ್‌ ಅವರು ವಕೀಲರಾದ ಮಿಥುನ್‌ ಜೈನ್‌ ಮತ್ತು ಅರ್ಜುನ್‌ ಸಯಾಲ್‌ ಅವರ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಕೋವಿಡ್‌– 19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ವೇತನ ಪಾವತಿಯಾಗಿಲ್ಲ ಅಥವಾ ಅವರ ವೇತನದಲ್ಲಿ ಕಡಿತ ಮಾಡಲಾಗಿದೆ ಇಲ್ಲವೇ ವೇತನ ಪಾವತಿಯೇ ವಿಳಂಬ ಆಗುತ್ತಿದೆ ಎಂದು ಅವರು ದೂರಿದ್ದಾರೆ.

ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಸಕಾಲದಲ್ಲಿ ವೇತನ ಪಾವತಿಸುವಂತೆ ರಾಜ್ಯ ಸರ್ಕಾರಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸರ್ಕಾರ 24 ಗಂಟೆಗಳೊಳಗೆ ಸೂಚನೆ ನೀಡಲಿದೆ ಎಂದು ತಿಳಿಸಿದರು.

ಮೇ 15ರ ಸುತ್ತೋಲೆಯಲ್ಲಿರುವ ಮಾರ್ಗದರ್ಶಿ ಸೂತ್ರದಲ್ಲಿ ಮಾರ್ಪಾಡು ಮಾಡಲಾಗುವುದು ಅಲ್ಲದೆ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಪರ್ಯಾಯ ವಸತಿ ಸೌಲಭ್ಯ ಒದಗಿಸಲು ಹೊಸ ಆದೇಶ ಹೊರಡಿಸಲಾಗುವುದು ಎಂದೂ ಅವರು ಭರವಸೆ ನೀಡಿದರು.

ಆರೋಗ್ಯ ಕಾರ್ಯಕರ್ತರಿಗೆ ಆಸ್ಪತ್ರೆಗಳು ವೇತನ ಪಾವತಿ ಮಾಡದಿದ್ದರೆ ಅದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಿಮಿನಲ್‌ ಅಪರಾಧವಾಗುತ್ತದೆ ಎಂಬ ಆದೇಶ ಹೊರಡಿಸಲೂ ಕೇಂದ್ರ ಸರ್ಕಾರ ಆಲೋಚಿಸುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.