ADVERTISEMENT

ಮೂಗಿನ ಮೂಲಕ ನೀಡುವ ಕೋವಿಡ್‌ ಲಸಿಕೆ ಆಸ್ಪತ್ರೆಗಳಿಗೆ ರವಾನೆ: ಭಾರತ್‌ ಬಯೋಟೆಕ್‌

ಪಿಟಿಐ
Published 5 ಫೆಬ್ರುವರಿ 2023, 14:41 IST
Last Updated 5 ಫೆಬ್ರುವರಿ 2023, 14:41 IST
....
....   

ನವದೆಹಲಿ: ಮೂಗಿನ ಮೂಲಕ ನೀಡಲಾಗುವ ಕೋವಿಡ್‌–19 ಲಸಿಕೆಯ 3 ಲಕ್ಷ ಡೋಸ್‌ಗಳನ್ನು ಎರಡು ದಿನಗಳ ಹಿಂದೆ ಕೆಲ ಆಸ್ಪತ್ರೆಗಳಿಗೆ ಕಳಿಸಲಾಗಿದೆ ಎಂದು ಭಾರತ್‌ ಬಯೋಟೆಕ್‌ ಸಂಸ್ಥೆ ಭಾನುವಾರ ತಿಳಿಸಿದೆ.

ಬೆಂಗಳೂರಿನಲ್ಲಿ ‘ಯುಡಬ್ಲ್ಯು– ಮ್ಯಾಡಿಸನ್‌ ವನ್ ಹೆಲ್ತ್‌ ಸೆಂಟರ್‌’ ಸ್ಥಾಪಿಸುವ ನಿಟ್ಟಿನಲ್ಲಿ ಯುನಿವರ್ಸಿಟಿ ಆಫ್‌ ವಿಸ್ಕೋಂಸಿನ್‌ (ಯುಡಬ್ಲ್ಯು)– ಮ್ಯಾಡಿಸನ್‌ ಗ್ಲೋಬಲ್‌ ಹೆಲ್ತ್‌ ಇನ್‌ಸ್ಟಿಟ್ಯೂಟ್‌ (ಜಿಎಚ್‌ಐ) ಮತ್ತು ಎಲ್ಲಾ ಫೌಂಡೇಷನ್‌ ಸಂಸ್ಥೆಗಳು ಒಪ್ಪಂದಕ್ಕೆ ಸಹಿ ಹಾಕಿದವು. ಈ ಹಿನ್ನೆಲೆಯಲ್ಲಿ ಏರ್ಪಾಡಾಗಿದ್ದ ಕಾರ್ಯಕ್ರಮದ ವೇಳೆ ಭಾರತ್‌ ಬಯೋಟೆಕ್‌ನ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಎಲ್ಲಾ ಈ ಮಾಹಿತಿ ನೀಡಿದರು.

ಈ ಲಸಿಕೆಯನ್ನು ರಫ್ತು ಮಾಡಲಾಗುತ್ತದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲವು ದೇಶಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಲಸಿಕೆಗಾಗಿ ಭಾರತ್‌ ಬಯೋಟೆಕ್‌ ಸಂಸ್ಥೆ ಎದುರು ಪ್ರಸ್ತಾಪ ಇರಿಸಿವೆ ಎಂದು ಹೇಳಿದರು.

ADVERTISEMENT

ದೇಶದ ಔಷಧಗಳಲ್ಲಿ ‘ಒಂದೇ ಗುಣಮಟ್ಟ, ಮಾನದಂಡ’ ಕಾಯ್ದುಕೊಳ್ಳಬೇಕೆಂದರೆ, ರಾಜ್ಯ ಸರ್ಕಾರಗಳ ಅಡಿಯಿರುವ ಎಲ್ಲಾ ಔಷಧ ನಿಯಂತ್ರಣ ಸಂಸ್ಥೆಗಳನ್ನು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಸಿಎಸ್‌ಒ) ಜೊತೆ ವಿಲೀನ ಮಾಡಬೇಕು ಎಂದು ಕೃಷ್ಣ ಅವರು ಸಲಹೆ ನೀಡಿದರು.

ಮೂಗಿನ ಮೂಲಕ ನೀಡುವ ಜಗತ್ತಿನ ಪ್ರಥಮ ಕೋವಿಡ್‌ ಲಸಿಕೆ ‘ಇನ್‌ಕೊವ್ಯಾಕ್‌’ಅನ್ನು ಜನವರಿ 26ರಂದು ಪರಿಚಯಿಸಲಾಯಿತು. ಈ ಲಸಿಕೆ ‘ಕೋವಿನ್‌’ ಆನ್‌ಲೈನ್‌ ವೇದಿಕೆಯಲ್ಲಿ ಲಭ್ಯವಿದೆ. ಖಾಸಗಿ ಮಾರುಕಟ್ಟೆಯಲ್ಲಿ ಒಂದು ಡೋಸ್‌ ದರ ₹ 800 ಇದ್ದು, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಗೆ ₹ 325ಗೆ ಮಾರಾಟವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.