ADVERTISEMENT

'ಕೋವ್ಯಾಕ್ಸಿನ್‌', 'ಕೋವಿಶೀಲ್ಡ್‌'- ಯಾರಿಗೆ ಯಾವ ಲಸಿಕೆ? ಇನ್ನೂ ಸಿಗದ ಉತ್ತರ

​ಪ್ರಜಾವಾಣಿ ವಾರ್ತೆ
Published 15 ಜನವರಿ 2021, 3:54 IST
Last Updated 15 ಜನವರಿ 2021, 3:54 IST
ಕೋವ್ಯಾಕ್ಸಿನ್‌
ಕೋವ್ಯಾಕ್ಸಿನ್‌    

ನವದೆಹಲಿ: ಇದೇ 16ರಂದು ದೇಶದಾದ್ಯಂತ 'ಕೋವ್ಯಾಕ್ಸಿನ್‌' ಮತ್ತು 'ಕೋವಿಶೀಲ್ಡ್‌' ಲಸಿಕೆಗಳ ವಿತರಣೆ ಅಭಿಯಾನಕ್ಕೆ ಚಾಲನೆ ದೊರೆಯಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಘೋಷಿಸಿದೆ. ಆದರೆ, ಈ ಎರಡು ಲಸಿಕೆಗಳಲ್ಲಿ ಯಾವುದು ಯಾರಿಗೆ ಸಿಗಲಿದೆ ಎಂಬುದಕ್ಕೆ ಸ್ಪಷ್ಟ ಉತ್ತರಗಳಿಲ್ಲ. ಹೈದರಾಬಾದ್‌ನ ಭಾರತ್‌ ಬಯೋಟೆಕ್‌ ಕಂಪನಿಯು ತಯಾರಿಸಿರುವ ‘ಕೋವ್ಯಾಕ್ಸಿನ್‌' ಲಸಿಕೆಯ ಪರಿಣಾಮಕಾರಿತ್ವದ ಬಗ್ಗೆ ಸಂಬಂಧಿಸಿದ ಮಾಹಿತಿಗಳು ಲಭ್ಯವಾಗದಿರುವುದೂ ಸಹ ಹಲವು ಗೊಂದಲಗಳಿಗೆ ಕಾರಣವಾಗಿದೆ.

'ಕೋವಿಡ್‌ ಲಸಿಕೆ ನೀಡಿಕೆ ಕಾರ್ಯಕ್ರಮವನ್ನು ಇದೇ 16ರಂದು ಮೋದಿ ಅವರು ಉದ್ಘಾಟಿಸಲಿದ್ದಾರೆ. ಇದು ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನವಾಗಲಿದೆ. ದೇಶದಲ್ಲಿ ಒಟ್ಟು 2,934 ಕೇಂದ್ರಗಳನ್ನು ತೆರೆಯಲಾಗಿದ್ದು, ಇವುಗಳಲ್ಲಿ ಮೊದಲ ದಿನ ಸುಮಾರು 3 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆಯ ಡೋಸ್‌ ನೀಡಲಾಗುತ್ತದೆ. ಒಂದು ಕೇಂದ್ರದಲ್ಲಿ ಗರಿಷ್ಠ 100 ಮಂದಿಗೆ ಲಸಿಕೆ ಚುಚ್ಚಲಾಗುತ್ತದೆ' ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಈಗಾಗಲೇ ನೋಂದಣಿ ಮಾಡಿಕೊಂಡಿರುವ ವೈದ್ಯರು, ಶುಶ್ರೂಷಕಿಯರು, ಸಫಾಯಿ ಕರ್ಮಚಾರಿಗಳು ಹಾಗೂ ಆಂಬುಲೆನ್ಸ್‌ ಚಾಲಕರು ಮೊದಲ ದಿನ ಲಸಿಕೆಗೆ ಒಳಪಡಲಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.

ADVERTISEMENT

ಸಾರ್ವಜನಿಕ ಆರೋಗ್ಯ ತಜ್ಞರ ಪ್ರಕಾರ, 'ಯಾವ ವರ್ಗದ ಕಾರ್ಮಿಕರಿಗೆ ಯಾವ ಲಸಿಕೆ ಬಳಸಬೇಕೆಂದು ರಾಜ್ಯಗಳಿಗೆ ನಿರ್ದಿಷ್ಟ ಸೂಚನೆಗಳನ್ನು ನೀಡಿಲ್ಲ'

ಕೋವಿಶೀಲ್ಡ್‌ ಹಾಗೂ ಕೋವ್ಯಾಕ್ಸಿನ್‌ ಲಸಿಕೆಯ ಒಟ್ಟು 1.65 ಕೋಟಿ ಡೋಸ್‌ಗಳನ್ನು ಈಗಾಗಲೇ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ವಿತರಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿಯ ಹಿರಿಯ ಸಾರ್ವಜನಿಕ ಆರೋಗ್ಯ ತಜ್ಞರು, 'ಯಾವ ವರ್ಗದ ಕಾರ್ಮಿಕರಿಗೆ ಯಾವ ಲಸಿಕೆ ಬಳಸಬೇಕೆಂಬುದರ ಬಗ್ಗೆ ಯಾವುದೇ ನಿರ್ದಿಷ್ಟ ಸೂಚನೆಗಳಿಲ್ಲ. ಸ್ವೀಕರಿಸುವವರ ಪಟ್ಟಿಗಳ ಪ್ರಕಾರ, ಲಸಿಕೆಗಳನ್ನು ವಿತರಿಸಲಾಗುತ್ತದೆ. ಎರಡೂ ಲಸಿಕೆಗಳನ್ನು ಸಮಾನವಾಗಿ ಪರಿಗಣಿಸಲಾಗುತ್ತಿರುವುದರಿಂದ ಕೆಲವರು ಕೋವ್ಯಾಕ್ಸಿನ್‌ ಅನ್ನು ಪಡೆಯಲಿದ್ದಾರೆ, ಇನ್ನು ಕೆಲವರು ಕೋವಿಶೀಲ್ಡ್‌ ಅನ್ನು ಸ್ವೀಕರಿಸಲಿದ್ದಾರೆ' ಎಂದು ತಿಳಿಸಿದ್ದಾರೆ.

ಕೋವ್ಯಾಕ್ಸಿನ್‌ ಬಗೆಗಿನ ಪರಿಣಾಮಕಾರಿತ್ವದ ಸಂಪೂರ್ಣ ಮಾಹಿತಿ ಇಲ್ಲದೇ ಕೇಂದ್ರ ಸರ್ಕಾರವು ಲಸಿಕೆಗೆ ಅನುಮತಿ ನೀಡಿರುವುಕ್ಕೆ ಕೆಲ ವಿಜ್ಞಾನಿಗಳು, ವೈದ್ಯಕೀಯ ಸಂಶೋಧಕರು ಮತ್ತು ನೀತಿ ನಿರೂಪಕರುಆಕ್ಷೇಪ ವ್ಯಕ್ತಪಡಿಸಿದ್ದಾರೆ.

'ಕೋವ್ಯಾಕ್ಸಿನ್‌ನ ತುರ್ತು ಬಳಕೆಯ ಅನುಮೋದನೆಗೆ ಯಾವ ಆಧಾರಗಳನ್ನು ಪರಿಗಣಿಸಬೇಕು ಮತ್ತು ಯಾವ ನಿಯಮಗಳನ್ನು ಪಾಲಿಸಬೇಕು ಎಂಬುದನ್ನು ಸರ್ಕಾರ ಇನ್ನೂ ಸ್ಪಷ್ಟಪಡಿಸಿಲ್ಲ' ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಅಧ್ಯಾಪಕ ಹಾಗೂ ಹಿರಿಯ ವಿಜ್ಞಾನಿ ಸತ್ಯಜಿತ್ ರಾಥ್ ಹೇಳಿದ್ದಾರೆ.

'ಕೋವಾಕ್ಸಿನ್‌ನ ಮೂರನೇ ಹಂತದ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಮಾಹಿತಿಗಳು ಇನ್ನೂ ಲಭ್ಯವಾಗಿಲ್ಲ. ಪರಿಣಾಮಕಾರಿತ್ವದ ಬಗ್ಗೆ ಸಂಪೂರ್ಣ ಮಾಹಿತಿಯಿಲ್ಲದೆ ಲಸಿಕೆ ನೀಡುವುದರಿಂದ ಸ್ವೀಕರಿಸುವವರಲ್ಲಿ ಅಭದ್ರತೆಯ ಭಾವನೆ ಮೂಡಬಹುದು. ಲಸಿಕೆ ವಿತರಣೆ ಅಭಿಯಾನಕ್ಕೂ ಮುನ್ನ ಹೆಚ್ಚಿನ ಪಾರದರ್ಶಕತೆ ಅತ್ಯಗತ್ಯ.' ಎಂದು ಇಂಡಿಯನ್ ಅಕಾಡೆಮಿ ಆಫ್ ಸೈನ್ಸ್‌ಸ್‌ನ ವಿಜ್ಞಾನಿಗಳ ಒಕ್ಕೂಟ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.