ADVERTISEMENT

ಕೋವಿಡ್‌: ಗಣರಾಜ್ಯೋತ್ಸವ ಪರೇಡ್‌ ವೀಕ್ಷಣೆಗೆ 5–8 ಸಾವಿರ ಮಂದಿಗೆ ಮಾತ್ರ ಅವಕಾಶ

ಪಿಟಿಐ
Published 18 ಜನವರಿ 2022, 14:08 IST
Last Updated 18 ಜನವರಿ 2022, 14:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೋವಿಡ್‌ ವ್ಯಾಪಕವಾಗಿ ಹರಡುತ್ತಿರುವುದರಿಂದ ಮುನ್ನೆಚ್ಚರಿಕೆಯಾಗಿ ಈ ವರ್ಷದ ಗಣರಾಜ್ಯ ದಿನದ ಪಥಸಂಚಲನ ಕಾರ್ಯಕ್ರಮಕ್ಕೆ ಹಾಜರಾಗುವ ಜನರ ಸಂಖ್ಯೆಯಲ್ಲಿ ಶೇ 70–80ರಷ್ಟು ಕಡಿತಗೊಳಿಸಲಾಗಿದೆ. ಆದ್ದರಿಂದ 5–8 ಸಾವಿರ ಜನರಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಕಳೆದ ವರ್ಷ ಪಥಸಂಚಲನ ಕಾರ್ಯಕ್ರಮದಲ್ಲಿ ಸುಮಾರು 25 ಸಾವಿರ ಜನರ ಭಾಗವಹಿಸುವಿಕೆಗೆ ಅವಕಾಶ ನೀಡಲಾಗಿತ್ತು.

ಅಲ್ಲದೆ ಈ ವರ್ಷದ ಪರೇಡ್‌ಗೆ ಮುಖ್ಯ ಅತಿಥಿ ಬರುತ್ತಾರೆಯೇ ಅಥವಾ ಇಲ್ಲವೇ ಎಂಬ ನಿರ್ಧಾರವನ್ನು ವಿದೇಶಾಂಗ ಸಚಿವಾಲಯವು ಇನ್ನೂ ತೆಗೆದುಕೊಳ್ಳಬೇಕಾಗಿದೆ ಎಂದು ಅಧಿಕಾರಿಗಳು ಉಲ್ಲೇಖಿಸಿದ್ದಾರೆ. ಕಳೆದ ವರ್ಷ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಇರಲಿಲ್ಲ.

ADVERTISEMENT

ಕಾರ್ಯಕ್ರಮದಲ್ಲಿ ಜನರು ಒಂದೆಡೆ ಸೇರುವುದು ಮತ್ತು ಸಾಮಾಜಿಕ ಅಂತರವನ್ನು ಕಾಪಾಡುವುದು ಮುಖ್ಯ ಉದ್ದೇಶವಾಗಿದೆ. ಕಾರ್ಯಕ್ರಮವು ಕೋವಿಡ್‌ ಹರಡಲು ವೇದಿಕೆಯಾಗಬಾರದು. ಆದ್ದರಿಂದ ಜನರ ಭಾಗವಹಿಸುವಿಕೆಯನ್ನು ಕಡಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದರು.

ಭಾಗವಹಿಸುವ ನಿರ್ದಿಷ್ಟ ಜನರ ಸಂಖ್ಯೆಯನ್ನು ಇನ್ನೂ ನಿರ್ಧರಿಸಿಲ್ಲ. ಇದು ಈ ವರ್ಷ 5–8 ಸಾವಿರದೊಳಗೆ ಇರಲಿದೆ. ಜನರು ವಾಹಿನಿಗಳಲ್ಲಿ ನೇರಪ್ರಸಾರದ ಪಥಸಂಚಲನವನ್ನು ವೀಕ್ಷಿಸಬಹುದು ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.