ADVERTISEMENT

ಕೋವಿಡ್‌-19 ಹಿನ್ನೆಲೆ: ಅಂತಿಮ ವರ್ಷದ ಪರೀಕ್ಷೆಗಳು ರದ್ದು?

ಪಿಟಿಐ
Published 25 ಜೂನ್ 2020, 18:33 IST
Last Updated 25 ಜೂನ್ 2020, 18:33 IST
ಯುಜಿಸಿ
ಯುಜಿಸಿ   

ನವದೆಹಲಿ: ಕೋವಿಡ್‌ ಪರಿಸ್ಥಿತಿಯ ಹಿನ್ನೆಲೆಯಲ್ಲಿಜುಲೈನಲ್ಲಿ ನಡೆಯಬೇಕಿದ್ದ ವಿಶ್ವವಿದ್ಯಾಲಯಗಳ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳ ಅಂತಿಮ ವರ್ಷದ ಪದವಿ ಪರೀಕ್ಷೆಗಳನ್ನು ರದ್ದುಪಡಿಸಿ, ಹೊಸ ಶೈಕ್ಷಣಿಕ ವರ್ಷದ ಆರಂಭವನ್ನು ಅಕ್ಟೋಬರ್‌ಗೆ ಮುಂದೂಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಮಧ್ಯಂತರ, ತ್ರೈಮಾಸಿಕ ಸೆಮಿಸ್ಟರ್‌ ಪರೀಕ್ಷೆ ಹಾಗೂ ಶೈಕ್ಷಣಿಕ ವರ್ಷದ ವೇಳಾಪಟ್ಟಿ ಕುರಿತು ಹಿಂದೆ ನೀಡಿದ್ದ ಮಾರ್ಗಸೂಚಿಗಳನ್ನು ಮರುಪರಿಶೀಲಿಸಲು ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ ಅವರು ವಿಶ್ವವಿದ್ಯಾಲಯ ಅನುದಾನ ಆಯೋಗಕ್ಕೆ (ಯುಜಿಸಿ) ಸೂಚಿಸಿದ್ದಾರೆ.

ಮಾರ್ಗಸೂಚಿಗಳ ಪರಿಶೀಲನೆ ಹಾಗೂ ಪರ್ಯಾಯ ಆಯ್ಕೆಗಳನ್ನು ತಿಳಿಸಲು ಯುಜಿಸಿ ನೇಮಿಸಿರುವ ಹರಿಯಾಣ ವಿಶ್ವವಿದ್ಯಾಲಯದ ಕುಲಪತಿ ಆರ್‌.ಸಿ.ಕುಹಾದ್‌ ನೇತೃತ್ವದ ಸಮಿತಿಗೆ ಕೇಳಲಾಗಿದೆ. ಪರಿಷ್ಕೃತ ಮಾರ್ಗಸೂಚಿಗಳನ್ನು ಒಂದು ವಾರದೊಳಗೆ ಪ್ರಕಟಿಸುವ ನಿರೀಕ್ಷೆ ಇದೆ ಎಂದು ತಿಳಿದುಬಂದಿದೆ.

ADVERTISEMENT

ಮರುಪರಿಶೀಲಿಸಿದ ಮಾರ್ಗಸೂಚಿಯು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಆರೋಗ್ಯ ಹಾಗೂ ಸುರಕ್ಷತೆಯ ಅಂಶಗಳನ್ನೊಳಗೊಂಡಿರಬೇಕು ಎಂದು ಸಚಿವಾಲಯ ಸ್ಪಷ್ಟವಾಗಿ ತಿಳಿಸಿದೆ.

ಪರಿಷ್ಕೃತ ಶೈಕ್ಷಣಿಕ ವೇಳಾಪಟ್ಟಿಯಂತೆ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ನಡೆಯಬೇಕಿದ್ದ ಪರೀಕ್ಷೆಗಳನ್ನು ರದ್ದುಗೊಳಿಸಬೇಕು. ಪ್ರತಿ ವಿದ್ಯಾರ್ಥಿಗೆ, ಆತನ ಹಿಂದಿನ ಶೈಕ್ಷಣಿಕ ಸಾಧನೆ ಆಧಾರದ ಮೇಲೆ ಅಂತಿಮ ಪರೀಕ್ಷೆಯ ಅಂಕಗಳನ್ನು ನೀಡಬಹುದು ಎಂಬುವುದು ತಜ್ಞರ ಸಮಿತಿಯ ಅಭಿಪ್ರಾಯವಾಗಿದೆ.

ಸಿಬಿಎಸ್‌ಸಿ: 10, 12ನೇ ತರಗತಿ ಪರೀಕ್ಷೆ ರದ್ದು

ಜುಲೈ ತಿಂಗಳಲ್ಲಿ ನಡೆಸಬೇಕಿದ್ದ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಬಾಕಿ ಉಳಿದಿರುವ ಪರೀಕ್ಷೆಗಳನ್ನು ಕೋವಿಡ್ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ಸುಪ್ರೀಂ ಕೋರ್ಟ್‌ನ ಪೀಠಕ್ಕೆ ತಿಳಿಸಿತು.

ಕೇಂದ್ರ ಸರ್ಕಾರ ಮತ್ತು ಸಿಬಿಎಸ್‌ಇ ಪರವಾಗಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಗುರುವಾರ ನ್ಯಾಯಮೂರ್ತಿಎ.ಎಂ.ಖಾನ್ ವಿಲ್ಕರ್ ನೇತೃತ್ವದ ಪೀಠಕ್ಕೆ ಈ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.