ADVERTISEMENT

ಕೋವಿಡ್‌: ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಪಂಜಾಬ್‌ಗೆ ಕೇಂದ್ರದಿಂದ ಉನ್ನತ ತಂಡ

ಪಿಟಿಐ
Published 22 ನವೆಂಬರ್ 2020, 13:01 IST
Last Updated 22 ನವೆಂಬರ್ 2020, 13:01 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಉತ್ತರ ಪ್ರದೇಶ, ಪಂಜಾಬ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಕೋವಿಡ್‌–19 ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೋವಿಡ್ ನಿರ್ವಹಣೆಗಾಗಿ ಕೇಂದ್ರದಿಂದ ಉನ್ನತ ಮಟ್ಟದ ತಂಡಗಳನ್ನು ಈ ರಾಜ್ಯಗಳಿಗೆ ನಿಯೋಜಿಸಲಾಗಿದೆ.‌

ಈ ಮೂರೂ ರಾಜ್ಯಗಳಲ್ಲಿ ಕೋವಿಡ್‌ ಸಕ್ರಿಯ ಪ್ರಕರಣಗಳ ವರದಿ ಸಂಖ್ಯೆ ಹೆಚ್ಚಿದೆ. ಆಸ್ಪತ್ರೆಗೆ ದಾಖಲಾಗುವವರು, ವೈದ್ಯರ ಮೇಲ್ವಿಚಾರಣೆಯಲ್ಲಿ ಮನೆಯಲ್ಲೇ ಪ್ರತ್ಯೇಕವಾಗಿರುವವರು (ಕ್ವಾರಂಟೈನ್) ಜತೆಗೆ ಪ್ರತಿದಿನವೂ ಹೊಸದಾಗಿ ಕೊರೊನಾ ಸೋಂಕಿಗೀಡಾಗುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ಮಾಹಿತಿ ನೀಡಿದೆ.

ಈ ಹಿಂದೆ ಕೋವಿಡ್ ಪ್ರಕರಣಗಳು ಹೆಚ್ಚಿದ್ದ ಹರಿಯಾಣ, ರಾಜಸ್ಥಾನ, ಗುಜರಾತ್, ಮಣಿಪುರ ಮತ್ತು ಛತ್ತೀಸಗಡ ರಾಜ್ಯಗಳಿಗೂ ಕೇಂದ್ರದಿಂದ ಉನ್ನತ ಮಟ್ಟದ ತಂಡಗಳನ್ನು ನಿಯೋಜಿಸಲಾಗಿತ್ತು.

ADVERTISEMENT

ಉತ್ತರ ಪ್ರದೇಶ, ಪಂಜಾಬ್ ಮತ್ತು ಹಿಮಾಚಲ ಪ್ರದೇಶಗಳಿಗೆ ತೆರಳಲಿರುವ ಮೂರು ಸದಸ್ಯರ ಉನ್ನತ ತಂಡಗಳು ಆಯಾ ರಾಜ್ಯಗಳಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗಿರುವ ಜಿಲ್ಲೆಗಳಿಗೆ ಭೇಟಿ ನೀಡುತ್ತವೆ. ಅಲ್ಲಿ ಪರೀಕ್ಷಾ ವಿಧಾನ, ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕ್ರಮಗಳನ್ನು ಬಲಪಡಿಸುವಿಕೆ ಹಾಗೂ ಕೋವಿಡ್ ಪಾಸಿಟಿವ್ ಪ್ರಕರಣಗಳನ್ನು ಸಮರ್ಥವಾಗಿ ಕ್ಲಿನಿಕಲ್ ನಿರ್ವಹಣಾ ವ್ಯವಸ್ಥೆಯನ್ನು ಬಲಪಡಿಸುವತ್ತ ಕಾರ್ಯತತ್ಪರವಾಗಲಿವೆ. ಸಕಾಲಿಕವಾಗಿ ರೋಗನಿರ್ಣಯ ಮತ್ತು ರೋಗ ನಿರ್ವಹಣೆಗೆ ಸಂಬಂಧಿಸಿದ ಸವಾಲುಗಳನ್ನು ಪರಿಣಾಮಕಾರಿಯನ್ನು ನಿರ್ವಹಿಸಲು ಕೇಂದ್ರದ ತಂಡಗಳು ಮಾರ್ಗದರ್ಶನ ನೀಡಲಿವೆ ಎಂದು ಆರೋಗ್ಯ ಸಚಿವಾಲಯವು ವಿವರಿಸಿದೆ.

ಕೋವಿಡ್‌–19 ಚೇತರಿಕೆಯ ಪ್ರಮಾಣವು ಶೇಕಡ 93.69ಕ್ಕೆ ಏರಿದೆ. 26 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 20 ಸಾವಿರದಿಂದ 50 ಸಾವಿರದೊಳಗೆ ಇದೆ. ಮಹಾರಾಷ್ಟ್ರ, ಕೇರಳದಲ್ಲಿ ಮಾತ್ರ ಈ ಸಂಖ್ಯೆ 50 ಸಾವಿರಕ್ಕೂ ಹೆಚ್ಚು ಇದೆ. ಹೊಸದಾಗಿ ಚೇತರಿಸಿಕೊಂಡ ಪ್ರಕರಣಗಳ ಸಂಖ್ಯೆಯಲ್ಲಿ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕೊಡುಗೆ ಶೇಕಡ 77.68ರಷ್ಟು ಇದೆ ಎಂದು ಸಚಿವಾಲಯವು ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.