ADVERTISEMENT

ಮುಂದಿನ ಆದೇಶದವರೆಗೂ ದೆಹಲಿಯ ಶಾಲೆಗಳು ತೆರೆಯುವುದಿಲ್ಲ: ಮನೀಷ್ ಸಿಸೋಡಿಯಾ

ಕೋವಿಡ್‌–19

ಪಿಟಿಐ
Published 28 ಅಕ್ಟೋಬರ್ 2020, 10:20 IST
Last Updated 28 ಅಕ್ಟೋಬರ್ 2020, 10:20 IST
ಶಾಲೆ ವಿದ್ಯಾರ್ಥಿಗಳೊಂದಿಗೆ ದೆಹಲಿ ಡಿಸಿಎಂ ಮನೀಷ್ ಸಿಸೋಡಿಯಾ–ಸಂಗ್ರಹ ಚಿತ್ರ
ಶಾಲೆ ವಿದ್ಯಾರ್ಥಿಗಳೊಂದಿಗೆ ದೆಹಲಿ ಡಿಸಿಎಂ ಮನೀಷ್ ಸಿಸೋಡಿಯಾ–ಸಂಗ್ರಹ ಚಿತ್ರ   

ನವದೆಹಲಿ: ಮುಂದಿನ ಆದೇಶದವರೆಗೂ ದೆಹಲಿಯಲ್ಲಿ ಶಾಲೆಗಳು ಮುಚ್ಚಿರಲಿವೆ ಎಂದು ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಬುಧವಾರ ಪ್ರಕಟಿಸಿದ್ದಾರೆ.

ಅಕ್ಟೋಬರ್‌ 31ರ ವರೆಗೂ ಶಾಲೆ ತೆರೆಯುವುದಿಲ್ಲ ಎಂದು ದೆಹಲಿ ಸರ್ಕಾರ ಈ ಹಿಂದೆ ಪ್ರಕಟಿಸಿತ್ತು. ಶಾಲೆ ತೆರೆಯುವ ಬಗ್ಗೆ ಪಾಲಕರಿಗೂ ಸಮ್ಮತಿ ಇಲ್ಲ ಎಂದು ಸಿಸೋಡಿಯಾ ಹೇಳಿದ್ದಾರೆ.

'ಶಾಲೆ ತೆರೆಯುವ ಬಗ್ಗೆ ಪಾಲಕರಿಂದ ಹಲವು ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಸುರಕ್ಷತೆಯ ಕುರಿತು ಪ್ರಶ್ನಿಸಲಾಗುತ್ತಿದೆ. ಶಾಲೆ ತೆರೆದಿರುವ ಕಡೆ ಮಕ್ಕಳಲ್ಲಿ ಕೋವಿಡ್‌–19 ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ಹಾಗಾಗಿ ನಾವು ದೆಹಲಿಯಲ್ಲಿ ಶಾಲೆ ತೆರೆಯದಿರಲು ನಿರ್ಧರಿಸಿದ್ದೇವೆ. ಮುಂದಿನ ಆದೇಶದವರೆಗೂ ಶಾಲೆಗಳು ಮುಚ್ಚಿರಲಿವೆ' ಎಂದಿದ್ದಾರೆ.

ADVERTISEMENT

ಕೊರೊನಾ ವೈರಸ್‌ ಸಾಂಕ್ರಾಮಿಕ ನಿಯಂತ್ರಿಸುವ ನಿಟ್ಟಿನಲ್ಲಿ ಮಾರ್ಚ್‌ 16ರಿಂದಲೇ ದೇಶದಾದ್ಯಂತ ಶಾಲೆಗಳು ಹಾಗೂ ವಿಶ್ವವಿದ್ಯಾಲಯಗಳನ್ನು ಮುಚ್ಚಲಾಗಿದೆ. ಮಾರ್ಚ್‌ 25ರಿಂದ ದೇಶದಾದ್ಯಂತ ಲಾಕ್‌ಡೌನ್‌ ಜಾರಿಯಾಯಿತು. ಅನಂತರದಲ್ಲಿ ಕೆಲವು ಶಿಕ್ಷಣ ಸಂಸ್ಥೆಗಳು ಆನ್‌ಲೈನ್‌ ತರಗತಿಗಳನ್ನು ನಡೆಸುತ್ತಿವೆ ಹಾಗೂ ಮುಖ್ಯ ಪರೀಕ್ಷೆಗಳನ್ನಷ್ಟೇ ನಡೆಸಲಾಗಿದೆ. ಕೆಲವು ರಾಜ್ಯಗಳಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೂ ಪರೀಕ್ಷೆ ಇಲ್ಲದೆಯೇ ಪಾಸು ಮಾಡಲಾಗಿದೆ.

ಲಾಕ್‌ಡೌನ್‌ ಸಡಿಲಗೊಳಿಸುವ ಕ್ರಮಗಳ ಪೈಕಿ ಐದನೇ ಹಂತದಲ್ಲಿ ಶಾಲೆಗಳನ್ನು ತೆರೆಯುವ ನಿರ್ಧಾರವನ್ನು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಬಿಟ್ಟಿದೆ. ಸೆಪ್ಟೆಂಬರ್‌ 21ರಿಂದಲೇ 9ರಿಂದ 12ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಪಾಠ ಮಾಡಬಹುದೆಂದು ಕೇಂದ್ರ ಸರ್ಕಾರ ಮಾರ್ಗಸೂಚಿಯಲ್ಲಿ ಪ್ರಕಟಿಸಿತ್ತು. ಹಲವು ರಾಜ್ಯಗಳು ಶಾಲೆಗಳನ್ನು ಪುನರಾರಂಭಿಸುವ ಪ್ರಕ್ರಿಯೆಯಲ್ಲಿ ತೊಡಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.