ADVERTISEMENT

ಚುನಾವಣಾ ಪ್ರಚಾರದಲ್ಲಿ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ: ದೆಹಲಿ ಹೈಕೋರ್ಟ್‌ಗೆ ಅರ್ಜಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2021, 10:25 IST
Last Updated 22 ಮಾರ್ಚ್ 2021, 10:25 IST
ದೆಹಲಿ ಹೈಕೋರ್ಟ್‌
ದೆಹಲಿ ಹೈಕೋರ್ಟ್‌   

ನವದೆಹಲಿ: ‘ಚುನಾವಣಾ ಪ್ರಚಾರದ ವೇಳೆ ನಾಯಕರು ಹಲವು ಬಾರಿ ಕೋವಿಡ್‌ ಮಾರ್ಗಸೂಚಿಯನ್ನು ಉಲ್ಲಂಘಿಸಿದ್ದಾರೆ. ಹಾಗಾಗಿ ಈ ರೀತಿ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಪ್ರಚಾರಕರು ಮತ್ತು ಅಭ್ಯರ್ಥಿಗಳಿಗೆ ಪ್ರಚಾರದಲ್ಲಿ ಭಾಗಿಯಾಗದಂತೆ ನಿರ್ಬಂಧ ವಿಧಿಸಬೇಕು’ ಎಂದು ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಈ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌, ಈ ಬಗ್ಗೆ ಪ್ರತಿಕ್ರಿಯಿಸುವಂತೆ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಡಿ.ಎನ್‌.ಪಟೇಲ್‌ ಮತ್ತು ಜಸ್ಮೀತ್‌ ಸಿಂಗ್‌ ಅವರ ಪೀಠವು ಅರ್ಜಿ ಬಗ್ಗೆ ಪ್ರತಿಕ್ರಿಯಿಸುವಂತೆ ಕೇಂದ್ರ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್‌ ನೀಡಿದೆ. ಮುಂದಿನ ವಿಚಾರಣೆಯನ್ನು ಏಪ್ರಿಲ್‌ 30ಕ್ಕೆ ನಿಗದಿ ಮಾಡಿದೆ.

ADVERTISEMENT

ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಚುನಾವಣಾ ಆಯೋಗದ ಪರ ವಕೀಲರಾದ ಸಿದ್ದಾಂತ್‌ ಕುಮಾರ್‌ ಅವರು,‘ದೆಹಲಿಯಲ್ಲಿ ಯಾವುದೇ ಚುನಾವಣೆ ನಡೆಯುತ್ತಿಲ್ಲ. ಅಲ್ಲದೆ ಯಾವುದೇ ನಿಯಮಗಳ ಉಲ್ಲಂಘನೆಯೂ ಆಗಿಲ್ಲ’ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಪುದುಚೇರಿಯಲ್ಲಿ ಮಾರ್ಚ್‌ 27 ರಿಂದ ಏಪ್ರಿಲ್‌ 29ರ ತನಕ ವಿವಿಧ ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.

‘ಚುನಾವಣೆಗೆ ಸಂಬಂಧಿಸಿದ ಪ್ರತಿಯೊಂದು ಚಟುವಟಿಕೆಗಳಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು ಎಂದು ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿತ್ತು. ಆದರೆ ಇತ್ತೀಚಿಗೆ ನಡೆದ ಚುನಾವಣಾ ಪ್ರಚಾರಗಳಲ್ಲಿ ಅಭ್ಯರ್ಥಿಗಳು ಮತ್ತು ಪ್ರಚಾರಕರು ಮುಖಗವಸು ಧರಿಸದೆ, ಮಾರ್ಗಸೂಚಿಯನ್ನು ಉಲ್ಲಂಘಿಸಿದ್ದಾರೆ. ಮಾಧ್ಯಮಗಳು ಪ್ರಸಾರ ಮಾಡಿರುವ ಫೋಟೊ ಮತ್ತು ವಿಡಿಯೊಗಳಲ್ಲಿ ಇದು ಸ್ಪರ್ಷವಾಗಿ ಕಾಣಿಸಿದೆ’ ಎಂದು ಅರ್ಜಿದಾರರ ಪರ ವಕೀಲರಾದ ಗೌರವ್‌ ಪಾಠಕ್‌ ಅವರು ವಾದಿಸಿದರು.

‘ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ. ಆದರೆ ರಾಜಕೀಯ ನಾಯಕರು, ಅಭ್ಯರ್ಥಿಗಳು, ಪ್ರಚಾರಕರು ಚುನಾವಣಾ ಪ್ರಕ್ರಿಯೆಯಲ್ಲಿ ಮಾಸ್ಕ್‌ ಧರಿಸದೇ ಇರುವ ಮೂಲಕ ಈ ಹಕ್ಕಿಗೆ ಧಕ್ಕೆಯನ್ನುಂಟು ಮಾಡುತ್ತಿದ್ದಾರೆ. ಚುನಾವಣಾ ಆಯೋಗವು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು ಎಂದು ಸೂಚಿಸಿದೆ. ಹೀಗಿರುವಾಗ ಆ ನಿಯಮ ಸರಿಯಾಗಿ ಪಾಲನೆ ಆಗುತ್ತಿದೆಯೇ ಎಂಬುದರ ಬಗ್ಗೆ ಗಮನವಹಿಸುವುದು ಕೂಡ ಆಯೋಗದ ಕರ್ತವ್ಯವಾಗಿದೆ’ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ತಾರಾ ಪ್ರಚಾರಕರು ನಿಯಮ ಉಲ್ಲಂಘಿಸುತ್ತಿದ್ದಾರೆ. ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಅರ್ಜಿದಾರರು ಮಾರ್ಚ್‌ 11 ರಂದು ಆಯೋಗಕ್ಕೆ ಪತ್ರವನ್ನು ಕೂಡ ಬರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.