ADVERTISEMENT

ಕೋವಿಡ್: ಸಿದ್ಧ ಪದ್ಧತಿ ಔಷಧಿಯ ಕ್ಲಿನಿಕಲ್‌ ಟ್ರಯಲ್‌ ಅಂತ್ಯ

ಪಿಟಿಐ
Published 10 ಡಿಸೆಂಬರ್ 2020, 8:19 IST
Last Updated 10 ಡಿಸೆಂಬರ್ 2020, 8:19 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಚೆನ್ನೈ: ಕೋವಿಡ್‌–19 ಚಿಕಿತ್ಸೆಗೆ ಪಾರಂಪರಿಕ ‘ಸಿದ್ಧ’ ಪದ್ಧತಿಯ ಔಷಧಿಯನ್ನು ನೀಡುವ ಸಂಬಂಧ ಚೆನ್ನೈನ ಸ್ಟ್ಯಾನ್ಲೆ ಸರ್ಕಾರಿ ಆಸ್ಪತ್ರೆಯಲ್ಲಿ ಕ್ಲಿನಿಕಲ್‌ ಟ್ರಯಲ್‌ ಮುಕ್ತಾಯವಾಗಿದೆ.

ಕೋವಿಡ್‌ ನಿವಾರಣೆಯಲ್ಲಿ ಈ ಔಷಧಿ ಎಷ್ಟು ಪರಿಣಾಮಕಾರಿ ಎಂಬುದರ ಕುರಿತು ವರದಿ ಸಿದ್ಧವಾಗಿದೆ. ಆಯುಷ್‌ ಸಚಿವಾಲಯದ ಅನುಮತಿ ದೊರೆತ ತಕ್ಷಣವೇ ಈ ವರದಿಯನ್ನು ಬಹಿರಂಗಪಡಿಸಲಾಗುವುದು ಸೆಂಟ್ರಲ್‌ ಕೌನ್ಸಿಲ್‌ ಫಾರ್ ರಿಸರ್ಚ್‌ ಇನ್‌ ಸಿದ್ಧ (ಸಿಸಿಆರ್‌ಎಸ್‌) ಪ್ರಧಾನ ನಿರ್ದೇಶಕಿ ಡಾ.ಕೆ.ಕನಕವಲ್ಲಿ ತಿಳಿಸಿದ್ದಾರೆ.

ಸಿದ್ಧ ಪದ್ಧತಿಯ ಔಷಧಿ ನೀಡುವ ವೈದ್ಯರ ಸಹಯೋಗದಲ್ಲಿ ಈ ಪ್ರಾಜೆಕ್ಟ್‌ಅನ್ನು ಕೈಗೆತ್ತಿಕೊಳ್ಳಲಾಗಿದೆ. ಸ್ಟ್ಯಾನ್ಲೆ ಆಸ್ಪತ್ರೆಯ ಜೊತೆಗೆ ಇತರ 9 ಕಡೆಗಳಲ್ಲಿ ಕ್ಲಿನಿಕಲ್‌ ಟ್ರಯಲ್‌ ಆರಂಭಗೊಂಡಿದ್ದು, ಅವು ಸಹ ಮುಕ್ತಾಯದ ಹಂತದಲ್ಲಿವೆ ಎಂದು ಮೂಲಗಳು ಹೇಳಿವೆ.

ADVERTISEMENT

‘ಸಾರ್ಸ್‌–ಕೋವ್‌–2’ ವೈರಸ್‌ನಿಂದಾಗುವ ಸೋಂಕಿನ ತೀವ್ರತೆಯನ್ನು ಕಡಿಮೆ ಮಾಡಲು, ಲಕ್ಷಣ ರಹಿತ ಕೋವಿಡ್‌–19 ತೀವ್ರಗೊಳ್ಳದಂತೆ ತಡೆಯಲು ಸಿದ್ಧ ಔಷಧಿಯನ್ನು ಈ ಟ್ರಯಲ್‌ನಲ್ಲಿ ಪ್ರಯೋಗಿಸಲಾಗಿದೆ.

ಕೋವಿಡ್‌ ಚಿಕಿತ್ಸೆಯಲ್ಲಿ ಅಲೋಪಥಿ ಪದ್ಧತಿಯಲ್ಲಿ ವಿಟಮಿನ್‌ ಸಿ ಹಾಗೂ ಸತು (ಝಿಂಕ್‌) ಇರುವ ಮಾತ್ರೆ ನೀಡಲಾಗುತ್ತದೆ. ಸಿದ್ಧ ಪದ್ಧತಿಯ ‘ಕಬಸುರ ಕುಡಿನೀರ್‌’ (ಕೆಎಸ್‌ಕೆ) ಎಂಬ ಔಷಧಿ ವಿಟಮಿನ್‌ ಸಿ ಮತ್ತು ಸತುವಿನಂತೆಯೇ ಕಾರ್ಯನಿರ್ವಹಿಸುತ್ತದೆ ಎಂಬುದು ಸಿದ್ಧ ಪದ್ಧತಿಯ ತಜ್ಞರ ಪ್ರತಿಪಾದನೆ. ಔಷಧಿಯ ಈ ಗುಣವನ್ನು ಸಹ ಟ್ರಯಲ್‌ ಸಂದರ್ಭದಲ್ಲಿ ಪರೀಕ್ಷಿಸಲಾಗಿದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.