ADVERTISEMENT

ಕೋವಿಡ್–19 ಹೆಚ್ಚಳ: ಅಲ್ಪಾವಧಿ ಲಾಕ್‌ಡೌನ್‌ ಜಾರಿಗೆ ಗುಜರಾತ್‌ ಹೈಕೋರ್ಟ್‌ ಸಲಹೆ

ಪಿಟಿಐ
Published 6 ಏಪ್ರಿಲ್ 2021, 11:30 IST
Last Updated 6 ಏಪ್ರಿಲ್ 2021, 11:30 IST
2020ರ ಏಪ್ರಿಲ್‌ನಲ್ಲಿ‌ ಲಾಕ್‌ಡೌನ್‌ ಸಂದರ್ಭದಲ್ಲಿ ಅಹಮದಾಬಾದ್‌ನಲ್ಲಿ ಪೊಲೀಸರು ಪಿಪಿಇ ಕಿಟ್‌ ಧರಿಸಿ ಗಸ್ತು ತಿರುಗಿರುವುದು
2020ರ ಏಪ್ರಿಲ್‌ನಲ್ಲಿ‌ ಲಾಕ್‌ಡೌನ್‌ ಸಂದರ್ಭದಲ್ಲಿ ಅಹಮದಾಬಾದ್‌ನಲ್ಲಿ ಪೊಲೀಸರು ಪಿಪಿಇ ಕಿಟ್‌ ಧರಿಸಿ ಗಸ್ತು ತಿರುಗಿರುವುದು   

ಅಹಮದಾಬಾದ್‌: ಕೋವಿಡ್‌–19 ಪರಿಸ್ಥಿತಿಯು ಅನಿಯಂತ್ರಿತವಾಗಿದ್ದು, ಮೂರರಿಂದ ನಾಲ್ಕು ದಿನಗಳು ಲಾಕ್‌ಡೌನ್‌ ಅಥವಾ ಕರ್ಫ್ಯೂ ಜಾರಿಗೊಳಿಸುವಂತೆ ಗುಜರಾತ್ ಹೈಕೋರ್ಟ್‌ ಮಂಗಳವಾರ ಸಲಹೆ ಮಾಡಿದೆ.

ರಾಜ್ಯದಲ್ಲಿ ಕೋವಿಡ್‌ ಪರಿಸ್ಥಿತಿಗೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸಿ ಹೈಕೋರ್ಟ್‌ ವಿಚಾರಣೆ ನಡೆಸಿದೆ. ಕೊರೊನಾ ವೈರಸ್‌ ಸೋಂಕು ವ್ಯಾಪಿಸುವುದನ್ನು ತಡೆಯಲು ಕರ್ಫ್ಯೂ ಅಥವಾ ಲಾಕ್‌ಡೌನ್‌ ಅವಶ್ಯವಾಗಿದೆ ಎಂದು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ವಿಕ್ರಂ ನಾಥ್‌ ಮತ್ತು ನ್ಯಾಯಮೂರ್ತಿ ಭಾರ್ಗವ್‌ ಕಾರಿಯಾ ಅವರಿದ್ದ ನ್ಯಾಯಪೀಠವು ಅಭಿಪ್ರಾಯ ಪಟ್ಟಿದೆ.

ಗುಜರಾತ್‌ನಲ್ಲಿ ಕೋವಿಡ್‌–19 ಪರಿಸ್ಥಿತಿಯು 'ಹದಗೆಟ್ಟ ಸ್ಥಿತಿಯಿಂದ ಅತ್ಯಂತ ಕೆಟ್ಟ ಸ್ಥಿತಿಯತ್ತ ಸಾಗಿದೆ ಹಾಗೂ ನಿಯಂತ್ರಣಕ್ಕೆ ಸಿಗದಂತಾಗಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ತುರ್ತು ಮತ್ತು ಗಂಭೀರ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಇಲ್ಲವಾದಲ್ಲಿ ಪರಿಸ್ಥಿತಿ ಕೈಮೀರಿ ಹೋಗಲಿದೆ. 3–4 ದಿನಗಳು ಕರ್ಫ್ಯೂ, ಇಲ್ಲವೇ ಲಾಕ್‌ಡೌನ್‌ ಜಾರಿಗೊಳಿಸುವ ಮೂಲಕ ಪರಿಸ್ಥಿತಿಯನ್ನು ಹತೋಟಿಗೆ ತರಬಹುದು' ಎಂದು ಮುಖ್ಯ ನ್ಯಾಯಮೂರ್ತಿ ವಿಕ್ರಂ ನಾಥ್‌ ಹೇಳಿದ್ದಾರೆ.

ADVERTISEMENT

ರಾಜಕೀಯ ಕಾರ್ಯಕ್ರಮಗಳು ಸೇರಿದಂತೆ ಎಲ್ಲ ರೀತಿಯ ಸಭೆ–ಸಮಾರಂಭಗಳನ್ನೂ ನಿಯಂತ್ರಿಸಬೇಕು ಅಥವಾ ನಿಲ್ಲಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಸೋಮವಾರ ಗುಜರಾತ್‌ನಲ್ಲಿ ಕೋವಿಡ್‌ ದೃಢಪಟ್ಟ ಸುಮಾರು 3,000 ಪ್ರಕರಣಗಳು ದಾಖಲಾಗಿವೆ.

ಗುಜರಾತ್‌ನ ನಾಲ್ಕು ಪ್ರಮುಖ ನಗರಗಳಲ್ಲಿ ರಾತ್ರಿ 9ರಿಂದ ಬೆಳಿಗ್ಗೆ 6ರವರೆಗೂ ಜಾರಿ ಮಾಡಲಾಗಿರುವ ರಾತ್ರಿ ಕರ್ಫ್ಯೂ ಪರಿಣಾಮಕಾರಿಯಾಗಿಲ್ಲ ಎಂಬುದನ್ನು ಮುಖ್ಯ ನ್ಯಾಯಮೂರ್ತಿ ಪ್ರಸ್ತಾಪಿಸಿದರು.

ಲಾಕ್‌ಡೌನ್‌ ಕುರಿತು ರಾಜ್ಯ ಸರ್ಕಾರವು ಅಡಕತ್ತರಿಗೆ ಸಿಲುಕಿರುವ ಸ್ಥಿತಿಯಲ್ಲಿದೆ ಎಂದು ಅಡ್ವೊಕೇಟ್‌ ಜನರಲ್‌ ಕಮಲ್‌ ತ್ರಿವೇದಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

'ಮೂರು–ನಾಲ್ಕು ದಿನಗಳ ಬಳಿಕ ನೀವು ಕರ್ಫ್ಯೂ ತೆರವುಗೊಳಿಸಬಹುದು. ಆದರೆ, ಈ ಕರ್ಫ್ಯೂದಿಂದ ಸಹಾಯವಾಗಬಹುದು ಎಂದು ಅನಿಸುತ್ತಿದೆ. 2020ರ ಮಾರ್ಚ್‌ನಲ್ಲೂ ಎರಡು, ಮೂರು ದಿನಗಳ ಕರ್ಫ್ಯೂ ಜಾರಿ ಮಾಡಲಾಗಿತ್ತು' ಎಂದು ಮುಖ್ಯ ನ್ಯಾಯಮೂರ್ತಿ ವಿಕ್ರಂ ನಾಥ್‌ ನೆನಪಿಸಿದರು.

ವೈರಸ್‌ ಸೋಂಕು ವ್ಯಾಪಿಸುವುದನ್ನು ತಡೆಯಲು ಕಚೇರಿ ಅಥವಾ ವಾಣಿಜ್ಯ ಸಂಸ್ಥೆಗಳಿಗೆ ಬರುವ ಸಿಬ್ಬಂದಿ ಸಂಖ್ಯೆಯನ್ನು ಸರ್ಕಾರವು ಮಿತಿಗೊಳಿಸಬೇಕು ಎಂದು ನ್ಯಾಯಮೂರ್ತಿ ಭಾರ್ಗವ್‌ ಸಲಹೆ ಮಾಡಿದ್ದಾರೆ.

ಸರ್ಕಾರದಿಂದ ಸೂಚನೆಗಳನ್ನು ಪಡೆದು ಮುಂದಿನ ನಡೆಯನ್ನು ಕೋರ್ಟ್‌ಗೆ ತಿಳಿಸುವುದಾಗಿ ಅಡ್ವೊಕೇಟ್‌ ಜನರಲ್‌ ಹೇಳಿದ್ದಾರೆ. ಲಾಕ್‌ಡೌನ್‌ ವಿಧಿಸುವ ಬಗ್ಗೆ ಸರ್ಕಾರವು ಗಂಭೀರವಾಗಿ ಯೋಚಿಸುತ್ತಿದೆ. ಆದರೆ, ಬಡ ಜನರಿಗೆ ಲಾಕ್‌ಡೌನ್‌ ತೀವ್ರ ಹೊರೆಯಾಗಬಹುದು ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ. ಹಾಗಾಗಿ, ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.