ADVERTISEMENT

ಪೆಹ್ಲು ಖಾನ್ ವಿರುದ್ಧದ ದನ ಕಳ್ಳ ಸಾಗಣೆ ಪ್ರಕರಣ ರದ್ದು

ರಾಜಸ್ಥಾನ ಹೈಕೋರ್ಟ್ ಆದೇಶ

ಪಿಟಿಐ
Published 31 ಅಕ್ಟೋಬರ್ 2019, 4:08 IST
Last Updated 31 ಅಕ್ಟೋಬರ್ 2019, 4:08 IST
   

ಜೈಪುರ : ಸ್ವಯಂಘೋಷಿತ ಗೋರಕ್ಷಕರು ನಡೆಸಿದ ಗುಂಪುದಾಳಿಯಲ್ಲಿ ಮೃತಪಟ್ಟಿದ್ದ ಪೆಹ್ಲು ಖಾನ್ ವಿರುದ್ಧದ ದನ ಕಳ್ಳ ಸಾಗಣೆ ಪ್ರಕರಣ ರದ್ದುಪಡಿಸಿ ರಾಜಸ್ಥಾನ ಹೈಕೋರ್ಟ್ ಬುಧವಾರ ಆದೇಶ ಹೊರಡಿಸಿದೆ.

‘ಹತ್ಯೆ ನಡೆಸುವ ಸಲುವಾಗಿಯೇ ದನ ಕಳ್ಳಸಾಗಣೆ ಮಾಡಲಾಗುತ್ತಿತ್ತು ಎನ್ನುವುದಕ್ಕೆ ಯಾವುದೇ ಸಾಕ್ಷ್ಯ
ಗಳಿಲ್ಲ’ ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿ ಪಂಕಜ್ ಭಂಡಾರಿ ಅವರ ಏಕಸದಸ್ಯ ಪೀಠ, ಪೆಹ್ಲುಖಾನ್, ಆತನ ಇಬ್ಬರು ಪುತ್ರರು, ಟ್ರಕ್ ಚಾಲಕ ಖಾನ್ ಮೊಹಮ್ಮದ್ ಹಾಗೂ ಇನ್ನಿಬ್ಬರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಿದೆ.

ದನ ಕಳ್ಳಸಾಗಣೆ ಆರೋಪ ಹೊರಿಸಿ ಪೆಹ್ಲು ಖಾನ್‌ (55), ಅವರ ಇಬ್ಬರು ಪುತ್ರರು ಹಾಗೂ ಟ್ರಕ್ ಚಾಲಕ ಖಾನ್ ಮೊಹಮ್ಮದ್ ಮೇಲೆ 2017ರ ಏ.1ರಂದು ಗುಂಪುದಾಳಿ ನಡೆದಿತ್ತು. ಪೆಹ್ಲು ಖಾನ್ ಏ.3ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ರಾಜಸ್ಥಾನ ಗೋಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಇವರ ವಿರುದ್ಧ ಪ್ರಕರಣ ದಾಖಲಾಗಿತ್ತು.

ADVERTISEMENT

ಮೇಲ್ಮನವಿ ಸಲ್ಲಿಸಿದ್ದ ರಾಜಸ್ಥಾನ ಸರ್ಕಾರ

ಆ.14ರಂದು ಅಲ್ವರ್‌ ನ್ಯಾಯಾಲಯ, ಪ್ರಕರಣದ ಎಲ್ಲಾ ಆರು ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿತ್ತು. ಆದರೆ ಇದನ್ನು ಪ್ರಶ್ನಿಸಿ ರಾಜಸ್ಥಾನ ಸರ್ಕಾರ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

ಪ್ರಕರಣದ ತನಿಖೆ ನಡೆಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರಾ ಎಂದು ಪತ್ತೆ ಮಾಡುವ ಸಲುವಾಗಿ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ಸಹ ರಚಿಸಿತ್ತು.

ಪೆಹ್ಲು ಖಾನ್‌ ಸಾವಿನಿಂದಾಗಿ, ಗೋರಕ್ಷಕರು ನಡೆಸುವ ಗುಂಪುದಾಳಿಗಳು ದೇಶದ ಗಮನ ಸೆಳೆದಿದ್ದವು ಮತ್ತು ಪೆಹ್ಲು ಖಾನ್ ಸಾವಿಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಹೈಕೋರ್ಟ್ ಆದೇಶದಿಂದ ಸಂತಸವಾಗಿದೆ. ಹತ್ಯೆ ಮಾಡುವ ಉದ್ದೇಶದಿಂದ ನಾವು ಗೋವುಗಳನ್ನು ಸಾಗಿಸುತ್ತಿರಲಿಲ್ಲ.
–ಇರ್ಷಾದ್, ಪೆಹ್ಲು ಖಾನ್ ಪುತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.