ನವದೆಹಲಿ: ಸಿಪಿಐ ಪ್ರಧಾನ ಕಾರ್ಯದರ್ಶಿಯಾಗಿ ಡಿ.ರಾಜಾ ಅವರು ಮೂರನೇ ಬಾರಿಗೆ ಆಯ್ಕೆಯಾದರು.
ಚಂಡೀಗಢದಲ್ಲಿ ಬುಧವಾರ ನಡೆದ ಪಕ್ಷದ ತ್ರೈವಾರ್ಷಿಕ ರಾಷ್ಟ್ರೀಯ ಸಮ್ಮೇಳನದಲ್ಲಿ ಅಮರ್‌ಜೀತ್ ಕೌರ್, ಬಿನೋಯ್ ವಿಶ್ವಂ ಅವರನ್ನು ಆಯ್ಕೆ ಮಾಡುವ ಕುರಿತು ಚರ್ಚೆ ನಡೆಯಿತು. ಆದರೆ, ಪಕ್ಷದ ಪ್ರಧಾನ ಕಾರ್ಯದರ್ಶಿಯಾದ ಮೊದಲ ದಲಿತ ವ್ಯಕ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದ ಡಿ.ರಾಜಾ ಅವರು ಅದೇ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.
ರಾಜಾ ಅವರು ರಾಜೀನಾಮೆ ನೀಡಲು ಸಿದ್ಧರಿದ್ದಾರೆ ಎಂದು ಕೆ.ನಾರಾಯಣ ಮತ್ತು ಪಲ್ಲಬ್ ಸೇನ್‌ಗುಪ್ತಾ ಅವರಂತಹ ನಾಯಕರು ಹೇಳಿದ್ದರು. ಆದರೆ, 2019ರ ಜುಲೈ 21ರಂದು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದ ರಾಜಾ ಅವರು, ‘ಇಂಡಿಯಾ’ ಮೈತ್ರಿ ಪಕ್ಷಗಳನ್ನು ನಿರ್ವಹಿಸಿದ ತಮ್ಮ ಅನುಭವ ಹಾಗೂ ಅವುಗಳೊಂದಿಗಿನ ಸಂಬಂಧವನ್ನು ಉಲ್ಲೇಖಿಸಿ, ತಮ್ಮನ್ನು ಇದೇ ಹುದ್ದೆಯಲ್ಲಿ ಮುಂದುವರಿಸುವಂತೆ ಮನವಿ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ.
ಯಾರಿಗೂ ವಯಸ್ಸಿನ ಮಿತಿಯನ್ನು ಸಡಿಲಿಸಬಾರದು ಎಂದು ಕೇರಳ ಘಟಕ ಸೇರಿದಂತೆ ಹಲವು ನಾಯಕರು ಒತ್ತಾಯಿಸಿದರೂ, ಕಾರ್ಯಕಾರಿಣಿಯು ರಾಜಾ ಪರವಾಗಿ ನಿಂತಿತು. ಆದರೂ, 75 ವರ್ಷ ದಾಟಿದ ಬೇರೆ ಯಾವುದೇ ನಾಯಕರನ್ನು ರಾಷ್ಟ್ರೀಯ ನಾಯಕತ್ವದಲ್ಲಿ ಮುಂದುವರಿಸದಿರಲು ನಿರ್ಧರಿಸಿತು.
ಕೇರಳದ ಜೊತೆಗೆ ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶದ ನಾಯಕರು ರಾಜಾ ಅವರ ಮುಂದುವರಿಕೆಯನ್ನು ವಿರೋಧಿಸಿದರು. ಆದರೆ, ಅವರನ್ನು ಉತ್ತರ ಭಾರತದ ನಾಯಕರು ಬೆಂಬಲಿಸಿದರು.
ಉಪ ಪ್ರಧಾನ ಕಾರ್ಯದರ್ಶಿ ನೇಮಕದ ಬಗ್ಗೆ ಚರ್ಚೆ ನಡೆದರೂ ಯಾವುದೇ ನಿರ್ಧಾರ ತೆಗೆದುಕೊಳ್ಳಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.