ADVERTISEMENT

ಶಬರಿಮಲೆ ವಿಚಾರ ಪರಿಣಾಮ ಬೀರಿಲ್ಲ: ಪಿಣರಾಯಿ ವಿಜಯನ್

ಕೇರಳ ಮುಖ್ಯಮಂತ್ರಿ ಅಬಿಪ್ರಾಯ

​ಪ್ರಜಾವಾಣಿ ವಾರ್ತೆ
Published 25 ಮೇ 2019, 16:24 IST
Last Updated 25 ಮೇ 2019, 16:24 IST
ಪಿಣರಾಯಿ ವಿಜಯನ್‌
ಪಿಣರಾಯಿ ವಿಜಯನ್‌   

ತಿರುವನಂತಪುರ: ಚುನಾವಣೆಯ ಫಲಿತಾಂಶಕ್ಕೆ ಸಂಬಂಧಿಸಿದಂತೆ ಸಿಪಿಎಂನ ನಿಲುವಿಗೆ ವಿರುದ್ಧವಾದ ಹೇಳಿಕೆ ನೀಡಿರುವ ಕೆರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌, ‘ಶಬರಿಮಲೆ ದೇವಸ್ಥಾನದ ವಿಚಾರದಲ್ಲಿ ಸರ್ಕಾರ ಕೈಗೊಂಡ ತೀರ್ಮಾನ ಚುನಾವಣೆಯ ಮೇಲೆ ಪರಿಣಾಮ ಬೀರಿಲ್ಲ’ ಎಂದಿದ್ದಾರೆ.

‘ಶಬರಿಮಲೆ ದೇವಸ್ಥಾನಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶ ಕಲ್ಪಿಸುವ ವಿಚಾರ ಚುನಾವಣೆಯಲ್ಲಿ ಪಕ್ಷದ ಪ್ರದರ್ಶನದ ಮೇಲೆ ಪರಿಣಾಮ ಬೀರಿತ್ತು’ ಎಂದು ಸಿಪಿಎಂ ನಾಯಕತ್ವ ಶುಕ್ರವಾರ ಹೇಳಿತ್ತು. ಇದನ್ನು ಶನಿವಾರ ನಿರಾಕರಿಸಿರುವ ವಿಜಯನ್‌, ‘ಶಬರಿಮಲೆ ವಿಚಾರದಲ್ಲಿ ಸರ್ಕಾರದ ನಿಲುವು ಸರಿಯಾಗಿತ್ತು. ಆದರೆ ಆ ಕುರಿತು ವಿರೋಧಪಕ್ಷಗಳವರು ನಡೆಸಿದ ತಪ್ಪು ಪ್ರಚಾರ ಅಭಿಯಾನದಿಂದ ಪಕ್ಷಕ್ಕೆ ಹಿನ್ನಡೆಯಾಯಿತು’ ಎಂದಿದ್ದಾರೆ.

‘ಶಬರಿಮಲೆಗೆ ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶ ಕಲ್ಪಿಸಬೇಕು ಎಂಬ ಸುಪ್ರೀಂ ಕೋರ್ಟ್‌ ತೀರ್ಪನ್ನು ಜಾರಿಮಾಡುವ ಹೊಣೆ ಸರ್ಕಾರದಮೇಲಿತ್ತು. ಇದು ಜನರಿಗೆ ಅರ್ಥವಾಗಿದೆ. ಶಬರಿಮಲೆ ವಿಚಾರ ಚುನಾವಣೆಯ ಮೇಲೆ ಪರಿಣಾಮ ಬೀರಿದ್ದು ನಿಜವಾಗಿದ್ದರೆ, ಪತ್ತನಂತಿಟ್ಟ ಕ್ಷೇತ್ರದಲ್ಲಿ ಬಿಜೆಪಿಗೆ ಹೆಚ್ಚು ಲಾಭವಾಗಬೇಕಾಗಿತ್ತು. ಆದರೆ ಇಲ್ಲಿ ಬಿಜೆಪಿ ಅಭ್ಯರ್ಥಿ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ’ ಎಂದು ವಿಜಯನ್‌ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡುತ್ತ ಹೇಳಿದ್ದಾರೆ.

ADVERTISEMENT

‘ಪಕ್ಷದ ಹೀನಾಯ ಸೋಲಿನ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು’ ಎಂದು ಕಾಂಗ್ರೆಸ್‌ ಹಾಗೂ ಬಿಜೆಪಿಯವರು ಮಾಡಿರುವ ಒತ್ತಾಯವನ್ನು ತಿರಸ್ಕರಿಸಿರುವ ವಿಜಯನ್‌, ‘ಲೋಕಸಭಾ ಚುನಾವಣೆಯ ಫಲಿತಾಂಶವು ರಾಜ್ಯ ಸರ್ಕಾರದ ಕಾರ್ಯವೈಖರಿಗೆ ಜನರು ನೀಡಿದ ತೀರ್ಪು ಎಂದು ಪರಿಗಣಿಸಲಾಗದು. ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ವಿಚಾರಗಳು ಮಾತ್ರ ಚರ್ಚಿತವಾಗುತ್ತವೆ. ಈ ಬಾರಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕೇರಳದ ಜನರು ತೀರ್ಮಾನಿಸಿದ್ದರು. ಅದರಂತೆ ರಾಜ್ಯದಲ್ಲಿ ಒಂದೇ ಒಂದು ಸ್ಥಾನವನ್ನು ಗೆಲ್ಲಲು ಬಿಜೆಪಿಗೆ ಸಾಧ್ಯವಾಗಲಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.