
ನವದೆಹಲಿ: ಕಾಲೇಜು ಕ್ಯಾಂಪಸ್‌ಗಳಲ್ಲಿ ಜಾತಿ ಆಧಾರಿತ ತಾರತಮ್ಯ ತಡೆಯಲು ವಿಶ್ವ ವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ರೂಪಿಸಿರುವ ಹೊಸ ನಿಯಮಗಳಲ್ಲಿನ ಲೋಪಗಳನ್ನು ಸರಿಪಡಿಸುವುದರ ಜತೆಗೆ ಐಐಟಿ, ಐಐಎಂ ಹಾಗೂ ಏಮ್ಸ್‌ಗಳಿಗೂ ವಿಸ್ತರಿಸಬೇಕು ಎಂದು ಸಿಪಿಎಂ ಪಕ್ಷವು ಬುಧವಾರ ಆಗ್ರಹಿಸಿದೆ.
ಅಲ್ಲದೇ, ವಿ.ವಿಗಳಲ್ಲಿ ಸಮಾನತೆ ಸಮಿತಿಗಳನ್ನು ರಚಿಸುವ ನಿರ್ಧಾರವನ್ನು ಸಂಸ್ಥೆಯ ಮುಖ್ಯಸ್ಥರ ಸುಪರ್ದಿಗೆ ಮಾತ್ರ ವಹಿಸದೆ ಪ್ರಜಾಪ್ರಭುತ್ವ ಪ್ರಕ್ರಿಯೆಗಳ ಮೂಲಕ ನಿರ್ಧಾರ ಕೈಗೊಳ್ಳಬೇಕು ಎಂದೂ ಹೇಳಿದೆ.
ಯುಜಿಸಿಯು ಜ.13ರಂದು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆ ಉತ್ತೇಜಿಸುವ ನಿಯಮ –2026 ಪರಿಚಯಿಸಿತು. ಜತೆಗೆ ತಾರತಮ್ಯ ಸಂಬಂಧಿತ ದೂರುಗಳನ್ನು ಪರಿಹರಿಸುವುದಕ್ಕಾಗಿ ಯುಜಿಸಿ ಸಂಯೋಜಿತವಾಗಿರುವ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಬಿಸಿ, ಎಸ್‌ಸಿ, ಎಸ್‌ಟಿ ಸಮುದಾಯದ ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಬೇಕು ಎಂಬುದನ್ನೂ ಕಡ್ಡಾಯಗೊಳಿಸಿತು.
‘ನಿಯಮಗಳಲ್ಲಿರುವ ಗಂಭೀರ ಲೋಪಗಳನ್ನು ಯುಜಿಸಿ ತಕ್ಷಣವೇ ಸರಿಪಡಿಸಬೇಕು. ವಿಶೇಷವಾಗಿ ಸಮಾನತೆ ಸಮಿತಿ ರಚನೆಗೆ ಸಂಬಂಧಿಸಿದ ನಿರ್ಧಾರವನ್ನು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ವಿದ್ಯಾರ್ಥಿ ಪ್ರತಿನಿಧಿಗಳು, ಅಧ್ಯಾಪಕರು ಹಾಗೂ ಬೋಧಕೇತರ ಸಿಬ್ಬಂದಿಗೆ ವಹಿಸಬೇಕು’ ಎಂದು ಸಿಪಿಎಂ ಆಗ್ರಹಿಸಿದೆ.
ಜತೆಗೆ ಒಂಬುಡ್ಸ್‌ಮನ್ ನೇಮಕದ ಅಧಿಕಾರವನ್ನು ಯುಜಿಸಿ ತಾನೇ ಉಳಿಸಿಕೊಂಡಿದೆ. ಆದರೆ, ರಾಜ್ಯ ಶಾಸಕಾಂಗಗಳು ರೂಪಿಸಿರುವ ಕಾಯ್ದೆಗಳ ಅಡಿಯಲ್ಲಿ ಗಣನೀಯ ವಿಶ್ವ ವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ ಎಂಬ ಅಂಶವನ್ನು ಪರಿಗಣಿಸಿ, ಈ ಅಧಿಕಾರವನ್ನು ಆಯಾ ರಾಜ್ಯ ಸರ್ಕಾರಗಳಿಗೆ ವಹಿಸಬೇಕೆಂದೂ ಪಕ್ಷವು ಆಗ್ರಹಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.