ADVERTISEMENT

ರೈಲ್ವೆ ಹಳಿ ಸರಿಪಡಿಸುವ ಕೆಲಸಕ್ಕೆ ಅರ್ಜಿ ಹಾಕಿದ್ದಾರೆ ಸ್ನಾತಕೋತ್ತರ ಪದವೀಧರರು

ರೈಲ್ವೆ ನೇಮಕಾತಿ ಪರೀಕ್ಷೆ ಬರೆಯುತ್ತಿರುವ ಕೋಟ್ಯಂತರ ಅಭ್ಯರ್ಥಿಗಳು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2018, 5:23 IST
Last Updated 17 ಸೆಪ್ಟೆಂಬರ್ 2018, 5:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಡಿ ದರ್ಜೆಯ 62,907 ಹುದ್ದೆಗಳ ನೇಮಕಾತಿಗಾಗಿ ಇಂದು (ಸೆಪ್ಟೆಂಬರ್ 17) ಪರೀಕ್ಷೆ ನಡೆಯುತ್ತಿದೆ. ಪರೀಕ್ಷೆ ಬರೆಯಲು ಅರ್ಜಿ ಸಲ್ಲಿಸಿರುವ 1.9 ಕೋಟಿ ಅಭ್ಯರ್ಥಿಗಳ ಪೈಕಿ ಬಹುತೇಕರು ಸ್ನಾತಕೋತ್ತರ ಪದವೀಧರರು ಎಂಬುದು ತಿಳಿದುಬಂದಿದೆ.

ಡಿ ದರ್ಜೆಯ ಹುದ್ದೆಗಳಿಗೆ ಹತ್ತನೇ ತರಗತಿ, ರಾಷ್ಟ್ರೀಯ ವೃತ್ತಿ ತರಬೇತಿ, ಕೈಗಾರಿಕಾ ತರಬೇತಿ ಸಂಸ್ಥೆ ಅಥವಾ ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಪ್ರಮಾಣಪತ್ರ ಕನಿಷ್ಠ ಅರ್ಹತೆಯಾಗಿದೆ. ಆದರೆ ಈ ಬಾರಿ, ಗ್ಯಾಂಗ್‌ಮನ್ (ಹಳಿ ನಿರ್ವಹಣೆ), ಗೇಟ್‌ಮನ್, ಎಲೆಕ್ಟ್ರಿಕಲ್, ಮೆಕಾನಿಕಲ್ ಎಂಜಿನಿಯರಿಂಗ್ ಮತ್ತು ಸಿಗ್ನಲ್, ಟೆಲಿ ಕಮ್ಯುನಿಕೇಷನ್ ವಿಭಾಗದ ಸಹಾಯಕರ ಹುದ್ದೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸ್ನಾತಕೋತ್ತರ ಪದವೀಧರರು, ಎಂಜಿನಿಯರಿಂಗ್ ಪದವೀಧರರು ಅರ್ಜಿ ಸಲ್ಲಿಸಿದ್ದಾರೆ. ಖಾಲಿ ಇರುವ ಪ್ರತಿ ಹುದ್ದೆಗೂ 302 ಮಂದಿಯಂತೆ ಅರ್ಜಿ ಸಲ್ಲಿಸಿದ್ದಾರೆ ಎಂದು ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ) ಮೂಲಗಳು ತಿಳಿಸಿವೆ.

ಖಾಲಿ ಇರುವ 1.27 ಲಕ್ಷ ಹುದ್ದೆಗಳ ಭರ್ತಿಗೆ ಆರ್‌ಆರ್‌ಬಿಯು ಆಗಸ್ಟ್ 31ರಂದು ಪರೀಕ್ಷೆ ನಡೆಸಿತ್ತು. ಈ ಪರೀಕ್ಷೆಗೆ 2.35 ಕೋಟಿ ಜನ ಅರ್ಜಿ ಸಲ್ಲಿಸಿದ್ದರು. ಅಗತ್ಯಕ್ಕಿಂತಲೂ ಹೆಚ್ಚು ಅರ್ಹತೆಯುಳ್ಳವರೇ ಪರೀಕ್ಷೆ ಬರೆದಿದ್ದರು. ಇದು ಭಾರತ ಉದ್ಯೋಗ ಬಿಕ್ಕಟ್ಟು ಎದುರಿಸುತ್ತಿರುವುದರ ಸ್ಪಷ್ಟ ಸೂಚನೆ ಎಂದು ಸರ್ಕಾರಿ ಅಧಿಕಾರಿಗಳು, ಸ್ವತಂತ್ರ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ ಎಂದು ದಿ ಪ್ರಿಂಟ್ ಜಾಲತಾಣ ವರದಿ ಮಾಡಿದೆ.

2014ರ ಲೋಕಸಭಾ ಚುನಾವಣೆಗೂ ಮುನ್ನ, ನಿರುದ್ಯೋಗ ಸಮಸ್ಯೆ ನಿವಾರಿಸುವುದೇ ತಮ್ಮ ಅಜೆಂಡಾ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಅವರು ಭರವಸೆ ನೀಡಿದ್ದರು. ಆದರೆ, 2014ರ ನಂತರ ಇದುವರೆಗೆ ಎಷ್ಟು ಸಂಖ್ಯೆಯ ಉದ್ಯೋಗ ಸೃಷ್ಟಿಯಾಗಿದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

2017ರ ಸೆಪ್ಟೆಂಬರ್‌ನಿಂದ 2018ರ ಫೆಬ್ರುವರಿ ನಡುವಣ ಅವಧಿಯಲ್ಲಿ 31.1 ಲಕ್ಷ ಉದ್ಯೋಗ ಸೃಷ್ಟಿಯಾಗಿವೆ ಎಂದು ಸರ್ಕಾರ ಹೇಳಿಕೊಂಡಿದೆ. ಆದರೆ, ಸೆಂಟರ್ ಫಾರ್‌ ಮಾನಿಟರಿಂಗ್ ಇಂಡಿಯನ್ ಎಕಾನಮಿಯಂತಹ (ಸಿಎಂಐಇ) ಸಂಸ್ಥೆಗಳು ಈ ಅವಧಿಯಲ್ಲಿ 18 ಲಕ್ಷದಷ್ಟು ಉದ್ಯೋಗ ಸೃಷ್ಟಿಯಾಗಿವೆ ಎಂದು ಹೇಳಿವೆ.

‘ವಿಪತ್ತಿನೆಡೆಗೆ ಸಾಗುತ್ತಿದ್ದೇವೆ’: ಹಲವು ವರ್ಷಗಳಿಂದ ಖಾಸಗಿ ಮತ್ತು ಕಾರ್ಪೊರೇಟ್ ಕ್ಷೇತ್ರಗಳ ಸ್ಥಿತಿ ಉತ್ತಮವಾಗಿಲ್ಲ. ಸರ್ಕಾರಿ ಉದ್ಯೋಗಗಳ ಪ್ರಮಾಣವೂ ಕಡಿಮೆಯಾಗುತ್ತಿದೆ. ಸೂಕ್ತ ವೇತನ, ಸಾಮಾಜಿಕ ಭದ್ರತೆ ಕಲ್ಪಿಸುವ ಸಮರ್ಪಕವಾದ ಉದ್ಯೋಗಗಳನ್ನು ಒದಗಿಸಿಕೊಡುವ ಕೆಲಸವಾಗುತ್ತಿಲ್ಲ. ಸರ್ಕಾರವು ಆರ್ಥಿಕ ಬೆಳವಣಿಗೆಯಾಗಿದೆ ಎನ್ನುತ್ತಿದೆ. ಆದರೆ, ನೋಟು ರದ್ದತಿಯಿಂದಾಗಿ ವಾಣಿಜ್ಯ ಕ್ಷೇತ್ರ ಸೊರಗಿದೆ. ಉದ್ಯೋಗ ಸೃಷ್ಟಿ ವಿಷಯದಲ್ಲಿ ನಾವು ವಿಪತ್ತಿನೆಡೆಗೆ ಸಾಗುತ್ತಿದ್ದೇವೆ ಎಂಬುದಾಗಿ ಅರ್ಥಶಾಸ್ತ್ರಜ್ಞ ಪ್ರಸೇನ್‌ಜಿತ್ ಬೋಸ್ ಹೇಳಿರುವುದನ್ನು ವರದಿ ಉಲ್ಲೇಖಿಸಿದೆ. ಅರ್ಹತೆಗೆ ಅನುಗುಣವಾದ ಉದ್ಯೋಗ ಸಿಗದ ಈ ಪರಿಸ್ಥಿತಿಯನ್ನು ‘ಬಲವಂತದ ಉದ್ಯೋಗ (ಫೋರ್ಸ್‌ಡ್ ಎಂಪ್ಲಾಯ್‌ಮೆಂಟ್)’ ಎಂದೂ ಅರ್ಥಶಾಸ್ತ್ರಜ್ಞರು ಬಣ್ಣಿಸಿದ್ದಾರೆ.

ಸಿಎಂಐಇ ಈ ವರ್ಷ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ 3.1 ಕೋಟಿ ಜನ ಉದ್ಯೋಗಾಕಾಂಕ್ಷಿಗಳಾಗಿದ್ದಾರೆ. ಸರ್ಕಾರವು ನೀತಿಯಲ್ಲಿ ಬದಲಾವಣೆ ಮಾಡದಿದ್ದರೆ ಅಥವಾ ಆರ್ಥಿಕತೆಯನ್ನು ವಿಸ್ತರಿಸದಿದ್ದರೆ ಉದ್ಯೋಗ ಸೃಷ್ಟಿಯಾಗದು ಎಂದೂ ಪ್ರಸೇನ್‌ಜಿತ್ ಅಭಿಪ್ರಾಯಪಟ್ಟಿದ್ದಾರೆ.

ಹೆಚ್ಚು ಅರ್ಹತೆ ಹೊಂದಿದ್ದರೂ ಉದ್ಯೋಗ ಭದ್ರತೆಗಾಗಿ ಕಡಿಮೆ ಅರ್ಹತೆಯ ಕೆಲಸಗಳಿಗೆ ಸೇರಲು ಸ್ನಾತಕೋತ್ತರ, ಎಂಜಿನಿಯರಿಂಗ್ ಪದವೀಧರರು ಮುಂದಾಗುತ್ತಿದ್ದಾರೆ ಎಂದು ಎಕ್ಸ್‌ಫೀನೋ ಎಂಬ ಸಂಸ್ಥೆಯ ಸಹ ಸ್ಥಾಪಕ ಕಮಲ್ ಕಾರಂತ್ ಎಂಬುವವರು ತಿಳಿಸಿದ್ದಾರೆ.

ಈ ಮಧ್ಯೆ, ಉದ್ಯೋಗ ಸೃಷ್ಟಿಯಾಗುತ್ತಿಲ್ಲ ಎಂಬುದನ್ನು ಎಸ್‌ಬಿಐನ ಮುಖ್ಯ ಆರ್ಥಿಕ ಸಲಹೆಗಾರ ಸೌಮ್ಯಕಾಂತಿ ಘೋಷ್ ಅಲ್ಲಗಳೆದಿದ್ದಾರೆ. ವರದಿಗಳ ಪ್ರಕಾರ, ಪ್ರತಿ ವರ್ಷ 1.5 ಕೋಟಿ ಜನ ಉದ್ಯೋಗಗಳಿಗೆ ಸೇರ್ಪಡೆಯಾಗುತ್ತಿದ್ದಾರೆ. 66 ಲಕ್ಷ ಮಂದಿ ಅರ್ಹ ಉದ್ಯೋಗ ಪಡೆಯುತ್ತಿದ್ದಾರೆ. 2016-17ನೇ ಹಣಕಾಸು ವರ್ಷದಲ್ಲಿ 190 ಕೈಗಾರಿಕೆಗಳಲ್ಲಿ 45 ಲಕ್ಷ ಜನ ಹೊಸದಾಗಿ ಉದ್ಯೋಗಗಳಿಗೆ ಸೇರ್ಪಡೆಯಾಗಿದ್ದಾರೆ. 2017–18ನೇ ವರ್ಷದಲ್ಲಿ 55 ಲಕ್ಷ ಜನ ಹೊಸದಾಗಿ ಉದ್ಯೋಗಕ್ಕೆ ಸೇರಿದ್ದಾರೆ ಎಂದು ಘೋಷ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.