ADVERTISEMENT

ಕೋವಿಡ್‌–19 ಅವಧಿಯಲ್ಲಿ ಮುಟ್ಟಿನ ಕುರಿತು ಜಾಗೃತಿ ಅಗತ್ಯ: ಯುನಿಸೆಫ್

ಪಿಟಿಐ
Published 28 ಮೇ 2020, 18:11 IST
Last Updated 28 ಮೇ 2020, 18:11 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ‘ಕೋವಿಡ್‌–19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಮಾಸಿಕ ಋತುಸ್ರಾವ (ಮುಟ್ಟು) ಕುರಿತು ಮೌನ ಮುರಿಯುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದು ಹಿಂದೆಂದಿಗಿಂತಲೂ ಅಗತ್ಯವಾಗಿದೆ’ ಎಂದು ಯುನಿಸೆಫ್‌ನ ಭಾರತದ ಪ್ರತಿನಿಧಿ ಯಾಸ್ಮಿನ್ ಅಲಿ ಹಕ್ ಹೇಳಿದ್ದಾರೆ.

ಮುಟ್ಟಿನ ನೈರ್ಮಲ್ಯ ದಿನದ ನಿಮಿತ್ತ ಗುರುವಾರ ಮಾತನಾಡಿದ ಅವರು, ‘ಲಾಕ್‌ಡೌನ್ ಅವಧಿಯಲ್ಲಿ ಮಹಿಳೆಯರು ಎದುರಿಸುತ್ತಿರುವ ಮುಟ್ಟಿನ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ. ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಲಕ್ಷಾಂತರ ಮಹಿಳೆಯರು ಮತ್ತು ಹುಡುಗಿಯರು ತಮ್ಮ ಮುಟ್ಟಿನ ಅವಧಿಯನ್ನು ಸುರಕ್ಷಿತ, ಆರೋಗ್ಯಕರ ಮತ್ತು ಘನತೆಯಿಂದ ನಿರ್ವಹಿಸುವುದು ಕಷ್ಟಕರವಾಗಿದೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಮುಟ್ಟಿನ ನೈರ್ಮಲ್ಯ ಕುರಿತು ಯುನಿಸೆಫ್ ವಾರದ ಹಿಂದೆ ಆರಂಭಿಸಿರುವ #RedDotChallenge ಸಾಮಾಜಿಕ ಮಾಧ್ಯಮಗಳ ಮೂಲಕ 30.2 ಲಕ್ಷ ಮಂದಿಯನ್ನು ತಲುಪಿದೆ.

ADVERTISEMENT

ಈ ಅಭಿಯಾನಕ್ಕೆ ಯುನಿಸೆಫ್ ರಾಷ್ಟ್ರೀಯ ಯುವ ರಾಯಭಾರಿಯಾಗಿರುವ ಓಟಗಾರ್ತಿ ಹಿಮಾ ದಾಸ್, ಸೆಲೆಬ್ರಿಟಿಗಳಾದ ಮಾನುಷಿ ಚಿಲ್ಲರ್, ದಿಯಾ ಮಿರ್ಜಾ, ಅದಿತಿ ರಾವ್ ಹೈದರಿ, ಡಯಾನಾ ಪೆಂಟಿ, ನೀರೂ ಬಜ್ವಾ ಸೇರಿದಂತೆ ಹಲವರು ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಯುನಿಸೆಫ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.