ADVERTISEMENT

370ನೇ ವಿಧಿ ರದ್ದತಿಗೆ ಒಂದು ವರ್ಷ: ಶ್ರೀನಗರದಲ್ಲಿ ಕರ್ಫ್ಯೂ ಜಾರಿ

ಪಿಟಿಐ
Published 4 ಆಗಸ್ಟ್ 2020, 1:42 IST
Last Updated 4 ಆಗಸ್ಟ್ 2020, 1:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ ಸಂವಿಧಾನದ 370ನೇ ವಿಧಿಯ ರದ್ದತಿಗೆ ಆಗಸ್ಟ್ 5ರಂದು ಒಂದು ವರ್ಷ ತುಂಬಲಿದೆ. ಈ ಹಿನ್ನೆಲೆಯಲ್ಲಿ ಮೊದಲ ವಾರ್ಷಿಕೋತ್ಸವದ ದಿನದಂದು ಹಿಂಸಾತ್ಮಕ ಪ್ರತಿಭಟನೆಗಳ ಬಗ್ಗೆ 'ನಿರ್ದಿಷ್ಟ ಮಾಹಿತಿ' ಲಭ್ಯವಾಗಿರುವ ಮೇರೆಗೆ ಶ್ರೀನಗರದ ಅಧಿಕಾರಿಗಳು ಸೋಮವಾರ ನಗರದಲ್ಲಿ ಕರ್ಫ್ಯೂ ವಿಧಿಸಿದ್ದಾರೆ.

ಶ್ರೀನಗರದ ಜಿಲ್ಲಾಧಿಕಾರಿ ಜಾಹಿದ್ ಇಕ್ಬಾಲ್ ಚೌಧರಿ, ಕರ್ಫ್ಯೂ ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಆಗಸ್ಟ್ 4 ಮತ್ತು ಆಗಸ್ಟ್ 5 ರಂದು ಜಾರಿಯಲ್ಲಿರುತ್ತದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಪ್ರತ್ಯೇಕತಾವಾದಿ ಮತ್ತು ಪಾಕ್ ಪ್ರಾಯೋಜಿತ ಗುಂಪುಗಳು ಆಗಸ್ಟ್ 5 ಅನ್ನು ಕರಾಳ ದಿನವನ್ನಾಗಿ ಆಚರಿಸಿ, ಹಿಂಸಾತ್ಮಕ ಪ್ರತಿಭಟನೆ ನಡೆಸಲು ಯೋಜನೆ ರೂಪಿಸಿರುವ ಬಗ್ಗೆ ಗುಪ್ತಚರ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕರ್ಫ್ಯೂ ಜಾರಿಗೆ ಆದೇಶಿಸಲಾಗಿದೆ ಎಂದು ಶ್ರೀನರಗದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

ADVERTISEMENT

ಸಾರ್ವಜನಿಕ ಜೀವನ ಮತ್ತು ಆಸ್ತಿಗೆ ಅಪಾಯವನ್ನುಂಟುಮಾಡುವ ಹಿಂಸಾತ್ಮಕ ಪ್ರತಿಭಟನೆಗಳ ಬಗ್ಗೆ ನಿರ್ದಿಷ್ಟ ಮಾಹಿತಿಗಳಿವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕೋವಿಡ್-19 ಕಂಟೈನ್‌ಮೆಂಟ್ ವಲಯಗಳಲ್ಲಿ ಯಾವುದೇ ಸಾಮೂಹಿಕ ಸಭೆ ಸೇರುವುದು ಅಪಾಯವನ್ನುಂಟು ಮಾಡಲಿದೆ. ಈಗಾಗಲೇ ಜಾರಿಯಲ್ಲಿರುವ ಕೋವಿಡ್-19 ಕಂಟೈನ್‌ಮೆಂಟ್‌ ವಲಯಗಳನ್ನು ಗುರಿಯಾಗಿಟ್ಟುಕೊಂಡು, ಜನರ ಓಡಾಟ ಮತ್ತು ಸಭೆ ಸೇರುವಿಕೆಯನ್ನು ನಿಷೇಧಿಸಲಾಗಿದೆ ಎಂದು ಎಸ್‌ಎಸ್‌ಪಿ ನೀಡಿರುವ ವರದಿಯಲ್ಲಿ ಹೇಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಇಂತಹ ಹಿಂಸಾಚಾರ ಮತ್ತು ಪ್ರಾಣ ಅಥವಾ ಆಸ್ತಿಪಾಸ್ತಿಗಳ ನಷ್ಟವನ್ನು ತಡೆಗಟ್ಟಲು ಜಿಲ್ಲೆಯಲ್ಲಿ ಕರ್ಫ್ಯೂ ಹೇರುವುದು ಅಗತ್ಯವಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.