ನವದೆಹಲಿ: ತೌಕ್ತೆ ಚಂಡಮಾರುತದ ಸಂದರ್ಭ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿರುವ ತಂಡಗಳ ಸಂಖ್ಯೆಯನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ (ಎನ್‌ಡಿಆರ್‌ಎಫ್) 53 ರಿಂದ 100ಕ್ಕೆ ಹೆಚ್ಚಿಸಿದೆ.
ಕರ್ನಾಟಕ, ಕೇರಳ, ತಮಿಳುನಾಡು, ಗುಜರಾತ್, ಗೋವಾ ಮತ್ತು ಮಹಾರಾಷ್ಟ್ರಗಳ ಕರಾವಳಿ ಪ್ರದೇಶಗಳಲ್ಲಿ ತಂಡಗಳ ನಿಯೋಜನೆ ಮಾಡಲಾಗಿದೆ ಎಂದು ವಿಪತ್ತು ನಿರ್ವಹಣಾ ದಳದ ಪ್ರಧಾನ ನಿರ್ದೇಶಕ ಎಸ್. ಎನ್. ಪ್ರಧಾನ್ ತಿಳಿಸಿದ್ದಾರೆ.
53 ತಂಡಗಳನ್ನು ನಿಯೋಜನೆ ಮಾಡಿರುವುದಾಗಿ ಈ ಹಿಂದೆ ಅವರು ತಿಳಿಸಿದ್ದರು.
ಹವಾಮಾನ ಇಲಾಖೆಯು ನೀಡಿರುವ ಹೊಸ ವರದಿಯ ಆಧಾರದಲ್ಲಿ ತಂಡಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಈ ನೂರು ತಂಡಗಳ ಪೈಕಿ 42 ಅನ್ನು ಆರು ರಾಜ್ಯಗಳಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಇನ್ನೂ 26 ತಂಡಗಳನ್ನು ಯಾವುದೇ ರಾಜ್ಯಗಳಿಗೆ ಕಳುಹಿಸಿಕೊಡಲು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.
32 ತಂಡಗಳನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿದ್ದು ಯಾವುದೇ ಕ್ಷಣದಲ್ಲಿ ಏರ್‌ಲಿಫ್ಟ್ ಮಾಡಲು ಸಿದ್ಧವಾಗಿ ಇರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ತಂಡಗಳಲ್ಲಿ ಇರುವ ಸಿಬ್ಬಂದಿಗೆ ಈಗಾಗಲೇ ಕೋವಿಡ್ ಲಸಿಕೆ ನೀಡಲಾಗಿದೆ. ರಕ್ಷಣೆ, ಪರಿಹಾರ ಕಾರ್ಯಾಚರಣೆಗೆ ಅಗತ್ಯ ಉಪಕರಣಗಳನ್ನು ಒದಗಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಎನ್‌ಡಿಆರ್‌ಎಫ್‌ನ ಒಂದು ತಂಡದಲ್ಲಿ 40 ಸಿಬ್ಬಂದಿ ಇದ್ದು, ಮರಕತ್ತರಿಸುವ ಉಪಕರಣ, ಬೋಟ್‌ಗಳು, ತುರ್ತು ವೈದ್ಯಕೀಯ ಸಾಮಗ್ರಿ, ಇತರ ರಕ್ಷಣೆ ಮತ್ತು ಪರಿಹಾರ ಸಾಮಗ್ರಿ ಒಳಗೊಂಡಿರುತ್ತದೆ.
ಅರಬ್ಬಿ ಸಮುದ್ರದ ಲಕ್ಷದ್ವೀಪದಲ್ಲಿ ಕೇಂದ್ರಿಕೃತಗೊಂಡಿದ್ದ ತೌಕ್ತೆ ಚಂಡಮಾರುತ ಮತ್ತಷ್ಟು ತೀವ್ರಗೊಂಡಿದ್ದು ಗುಜರಾತ್ ಕರಾವಳಿಯತ್ತ ಸಾಗುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶನಿವಾರ ಬೆಳಿಗ್ಗೆ ತಿಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.