ADVERTISEMENT

ಮೇ 26ಕ್ಕೆ ಯಾಸ್ ಚಂಡಮಾರುತ: ಪಶ್ಚಿಮ ಬಂಗಾಳ, ಒಡಿಶಾದಲ್ಲಿ ಕಟ್ಟೆಚ್ಚರ

​ಪ್ರಜಾವಾಣಿ ವಾರ್ತೆ
Published 22 ಮೇ 2021, 18:59 IST
Last Updated 22 ಮೇ 2021, 18:59 IST
ಸೆಟಲೈಟ್‌ ಚಿತ್ರ ( ಚಿತ್ರ ಕೃಪೆ –ಐಎಂಬಿ)
ಸೆಟಲೈಟ್‌ ಚಿತ್ರ ( ಚಿತ್ರ ಕೃಪೆ –ಐಎಂಬಿ)   

ನವದೆಹಲಿ:‘ಯಾಸ್‌’ ಚಂಡಮಾರುತವು ಭಾರಿ ಬಿರುಗಾಳಿಯ ಸ್ವರೂಪ ಪಡೆದು ಮೇ 26ರಂದು ಒಡಿಶಾ ಮತ್ತು ಪಶ್ಚಿಮ ಬಂಗಾಳ ಕರಾವಳಿಯನ್ನು ಹಾದುಹೋಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಶನಿವಾರ ತಿಳಿಸಿದೆ.

ಪೂರ್ವ- ಮಧ್ಯ ಬಂಗಾಳಕೊಲ್ಲಿ ಮತ್ತು ಉತ್ತರ ಅಂಡಮಾನ್ ಸಮುದ್ರದ ಮೇಲೆ ಶನಿವಾರ ಕಡಿಮೆ ಒತ್ತಡದ ಪ್ರದೇಶ ರೂಪುಗೊಂಡಿದೆ. ಇದು ತೀವ್ರ ಸ್ವರೂಪದ ಚಂಡಮಾರುತವಾಗಿ ರೂಪುಗೊಳ್ಳುವ ಸಾಧ್ಯತೆ ಇದೆ.

‘ಈಗ ನಿರ್ಮಾಣವಾಗಿರುವ ಕಡಿಮೆ ಒತ್ತಡದ ಪ್ರದೇಶದಲ್ಲಿ ಮೇ 23ರ ಬೆಳಗಿನ ಹೊತ್ತಿಗೆ ವಾಯುಭಾರ ಕುಸಿತವಾಗಬಹುದು. ನಂತರ ಅದು ವಾಯವ್ಯ ದಿಕ್ಕಿಗೆ ತೆರಳುವ ಸಾಧ್ಯತೆ ಇದೆ. ಮೇ 24ರಂದು ಅದು ಚಂಡಮಾರುತದ ರೂಪ ಪಡೆದು, ಮುಂದಿನ 24 ಗಂಟೆಗಳಲ್ಲಿ ತೀವ್ರ ಸ್ವರೂಪ ಪಡೆಯಬಹುದು. 26ರ ಬೆಳಿಗ್ಗೆ ಪಶ್ಚಿಮ ಬಂಗಾಳ, ಉತ್ತರ ಒಡಿಶಾ ಮತ್ತು ಬಾಂಗ್ಲಾದೇಶ ಕರಾವಳಿಯಲ್ಲಿ ಗಂಟೆಗೆ 90ರಿಂದ 100 ಕಿ.ಮೀ. ವೇಗದಲ್ಲಿ ಗಾಳಿ ಬೀಸಬಹುದು. ಸಂಜೆಯ ವೇಳೆಗೆ ಗಾಳಿಯ ವೇಗ ಗಂಟೆಗೆ 110 ಕಿ.ಮೀ. ವರೆಗೂ ತಲುಪುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ಹೆಚ್ಚು ಹಾನಿಗೆ ಒಳಗಾಗಬಹುದು ಎಂದು ನಿರೀಕ್ಷಿಸಲಾಗಿರುವ ಪ್ರದೇಶಗಳಲ್ಲಿ ಭಾರತೀಯ ನೌಕಾಪಡೆಯ ಹಡಗು ಹಾಗೂ ವಿಮಾನಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ. ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಪ್ರವಾಹ ಪರಿಹಾರದ ಎಂಟು ತಂಡಗಳು, ಮುಳುಗು ತಜ್ಞರ ನಾಲ್ಕು ತಂಡಗಳು ಸನ್ನದ್ಧ ಸ್ಥಿತಿಯಲ್ಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಂಡಮಾರುತಕ್ಕೆ ಒಳಗಾಗಲಿರುವ ಪ್ರದೇಶದ ವೈಮಾನಿಕ ಸಮೀಕ್ಷೆ ನಡೆಸಲು ಅನುಕೂಲವಾಗುವಂತೆ, ನೌಕಾಪಡೆಯ ವಿಶಾಖಪಟ್ಟಣದಲ್ಲಿರುವ ವಾಯುನೆಲೆ ಐಎನ್‌ಎಸ್‌ ದೆಗಾ ಹಾಗೂ ಚೆನ್ನೈನ ಐಎನ್‌ಎಸ್‌ ರಜಲಿಯಲ್ಲಿ ವಿಮಾನಗಳನ್ನು ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ ಎಂದು ನೌಕಾಪಡೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.