ಭುವನೇಶ್ವರ: ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ತೀವ್ರಗೊಂಡಿದ್ದು, ಮುಂದಿನ 24 ಗಂಟೆಗಳಲ್ಲಿ ಚಂಡಮಾರುತದ ರೂಪವನ್ನು ಪಡೆದು ನಾಳೆ ಒಡಿಶಾ, ಆಂಧ್ರಪ್ರದೇಶ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಭವನೀಯ ಚಂಡಮಾರುತದ ಹಿನ್ನೆಲೆಯಲ್ಲಿ ಒಡಿಶಾ ಸರ್ಕಾರವು ಸವಾಲನ್ನು ಎದುರಿಸಲು ಸಾಕಷ್ಟು ರಕ್ಷಣಾ ತಂಡ, ಯಂತ್ರೋಪಕರಣಗಳು ಮತ್ತು ಲಾಜಿಸ್ಟಿಕ್ಸ್ ಅನ್ನು ಸಿದ್ಧಪಡಿಸುವ ಮೂಲಕ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿದೆ
ಐಎಂಡಿಯ ಸಲಹೆಗಳ ಆಧಾರದ ಮೇಲೆ ರಾಜ್ಯ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಗುರುವಾರ ಸಂಜೆಯೊಳಗೆ ಎಲ್ಲಾ ಮೀನುಗಾರರು ದಡಕ್ಕೆ ಮರಳಿದ್ಧಾರೆ ಎಂದು ಒಡಿಶಾದ ವಿಶೇಷ ಪರಿಹಾರ ಆಯುಕ್ತ ಪಿ ಕೆ ಜೆನಾ ತಿಳಿಸಿದ್ದಾರೆ.
ಗುರುವಾರ ಸಂಜೆ ಬಿಡುಗಡೆಯಾದ ಐಎಂಡಿ ಬುಲೆಟಿನ್ ಪ್ರಕಾರ, ಮಾರುತಗಳು ವಾಯುವ್ಯದ ಕಡೆಗೆ ಚಲಿಸಲಿದ್ದು, ಸಂಜೆ 5.30ರ ಹೊತ್ತಿಗೆ ವಿಶಾಖಪಟ್ಟಣದಿಂದ ಸುಮಾರು 960 ಕಿ.ಮೀ ದೂರದ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಕೇಂದ್ರೀಕೃತವಾಗಿವೆ.
ಶುಕ್ರವಾರದಿಂದ ತೀವ್ರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ತಿಳಿಸಿದೆ. ಶನಿವಾರ ಒಡಿಶಾ ಕರಾವಳಿಯ ಸಮೀಪದಲ್ಲಿ ಚಂಡಮಾರುತವು 100 ಕಿಮೀ ವೇಗವನ್ನು ಪಡೆಯುತ್ತದೆ ಎಂದು ಮುನ್ಸೂಚನೆ ತಿಳಿಸಿದೆ.
ಪ್ರಸ್ತುತ ವಾಯುಭಾರ ಕುಸಿತದಿಂದಾಗಿ ಶುಕ್ರವಾರ ಚಂಡಮಾರುತ ತೀವ್ರಗೊಳ್ಳಲಿದೆ ಎಂದು ಬುಲೆಟಿನ್ ಹೇಳಿದೆ.
ಈ ವ್ಯವಸ್ಥೆಯು ಆರಂಭದಲ್ಲಿ ಪಶ್ಚಿಮ-ವಾಯುವ್ಯದ ಕಡೆಗೆ ಚಲಿಸುತ್ತದೆ ಮತ್ತು ಡಿಸೆಂಬರ್ 4 ರ ಸಂಜೆಯವರೆಗೆ ಈಶಾನ್ಯ ಮತ್ತು ವಾಯುವ್ಯಕ್ಕೆ ಚಲನೆಯನ್ನು ಕ್ರಮೇಣ ಬದಲಾವಣೆಗಳನ್ನು ಹೊಂದಿರುತ್ತದೆ ಎಂದು ಅದು ಹೇಳಿದೆ.
ನಂತರ ಮಾರುತಗಳು ಉತ್ತರ-ಈಶಾನ್ಯಕ್ಕೆ ಮಾರ್ಗ ಬದಲಿಸುತ್ತವೆ. ಡಿಸೆಂಬರ್ 4 ರ ತಡರಾತ್ರಿ ಉತ್ತರ ಆಂಧ್ರಪ್ರದೇಶ-ದಕ್ಷಿಣ ಒಡಿಶಾ ಕರಾವಳಿಯನ್ನು ದಾಟುತ್ತವೆ ಎಂದು ಅದು ತಿಳಿಸಿದೆ.
ಒಡಿಶಾ ವಿಶೇಷ ಪರಿಹಾರ ಆಯುಕ್ತ (ಎಸ್‌ಆರ್‌ಸಿ) ಪಿ ಕೆ ಜೆನಾ ಮಾತನಾಡಿ, ರಾಜ್ಯ ಸರ್ಕಾರವು ಎನ್‌ಡಿಆರ್‌ಎಫ್‌ನ 17, ಒಡಿಆರ್‌ಎಫ್‌ನ 60 ಮತ್ತು ಅಗ್ನಿಶಾಮಕ ದಳದ 172 ಸದಸ್ಯರನ್ನು ಒಳಗೊಂಡ 249 ತಂಡಗಳನ್ನು ಸಿದ್ಧಪಡಿಸಿದೆ ಮತ್ತು ಅವುಗಳನ್ನು ಜಿಲ್ಲೆಗಳಿಗೆ ನಿಯೋಜಿಸಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.