ADVERTISEMENT

ಸಂಸತ್ತಿನಲ್ಲಿ ಕರ್ನಾಟಕ | ಇಚ್ಛಾಶಕ್ತಿ ಕೊರತೆ: ಸಾಕಾರಗೊಳ್ಳದ ಕೆರೆಗಳ ಪುನಶ್ಚೇತನ

ಲೋಕಸಭೆಯಲ್ಲಿ ಸಂಸದ ಡಿ.ಕೆ. ಸುರೇಶ್‌ ಆರೋಪ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2019, 19:27 IST
Last Updated 21 ನವೆಂಬರ್ 2019, 19:27 IST
   

ನವದೆಹಲಿ: ‘ಬೆಂಗಳೂರಿನ ಬೆಳ್ಳಂದೂರು ಮತ್ತಿತರ ಪ್ರಮುಖ ಕೆರೆಗಳ ಪುನಶ್ಚೇತನ ಕಾರ್ಯವು ಸರ್ಕಾರದ ಇಚ್ಛಾಶಕ್ತಿಯ ಕೊರತೆಯಿಂದಾಗಿ ಸಾಕಾರಗೊಂಡಿಲ್ಲ’ ಎಂದು ಬೆಂಗಳೂರು ಗ್ರಾಮೀಣ ಕ್ಷೇತ್ರದ ಸಂಸದ, ಕಾಂಗ್ರೆಸ್‌ನ ಡಿ.ಕೆ. ಸುರೇಶ್‌ ದೂರಿದರು.

ವಾಯು ಮಾಲಿನ್ಯ ಹಾಗೂ ಹವಾಮಾನ ಬದಲಾವಣೆ ವಿಷಯದ ಕುರಿತು ಲೋಕಸಭೆಯಲ್ಲಿ ಗುರುವಾರ ಸಂಜೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬೆಂಗಳೂರಿನ ಮಲಿನಗೊಂಡಿರುವ ಕೆರೆಗಳ ಸಂರಕ್ಷಣೆಗಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ)ಯು ಅನೇಕ ಬಾರಿ ನೀಡಿರುವ ಆದೇಶಗಳ ಸಮರ್ಪಕ ಪಾಲನೆಯಾಗಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.

ಎನ್‌ಜಿಟಿಯ ಆದೇಶಗಳ ಜಾರಿಯ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆವಹಿಸಿ, ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿರ್ದೇಶನ ನೀಡುವ ಮೂಲಕ ಕೆರೆಗಳ ಕಾಯಕಲ್ಪಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಕನಕಪುರ ಬಳಿ 500 ಎಕರೆ ವ್ಯಾಪ್ತಿಯಲ್ಲಿರುವ ಬೈರಮಂಗಲ ಕೆರೆ ಕಲುಷಿತಗೊಂಡಿದೆ. ಅದರ ಪುನಶ್ಚೇತನಕ್ಕೂ ಕೇಂದ್ರ ವಿಶೇಷ ಆಸಕ್ತಿ ತಾಳಬೇಕು ಎಂದು ಅವರು ಕೋರಿದರು.

ಕೃಷಿ ತ್ಯಾಜ್ಯಕ್ಕೆ ಬೆಂಕಿ ಇಡುತ್ತಿರುವ ರೈತರಿಂದ ಮಾತ್ರ ಪರಿಸರ ಮಲಿನಗೊಂಡಿದೆ ಎಂದು ದೂಷಿಸದೆ, ಪರಿಸರದ ಮೇಲೆ ದೌರ್ಜನ್ಯ ಎಸಗುತ್ತಿರುವ ಕೈಗಾರಿಕೆಗಳು ಮತ್ತು ಬಂಡವಾಳ ಶಾಹಿಗಳನ್ನು ನಿಯಂತ್ರಿಸಲು ಸೂಕ್ತ ಕಾನೂನು ರೂಪಿಸಬೇಕು ಎಂದು ಅವರು ಕನ್ನಡದಲ್ಲೇ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.