ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಕೇಂದ್ರ ಸರ್ಕಾರಿ ನೌಕರರ ಹೆಚ್ಚುವರಿ ತುಟ್ಟಿ ಭತ್ಯೆ (ಡಿ.ಎ.) ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರ (ಡಿ.ಆರ್.) ಅನ್ನು ಬಿಡುಗಡೆ ಮಾಡಲು ಅನುಮೋದನೆ ನೀಡಿದೆ.
ಪ್ರಸ್ತುತ ತುಟ್ಟಿ ಭತ್ಯೆ/ಪರಿಹಾರ ಮೊತ್ತವು ಮೂಲ ವೇತನ/ಪಿಂಚಣಿಯ ಶೇ 55ರಷ್ಟಿದ್ದು ಈಗ ಶೇ 3 ರಷ್ಟನ್ನು ಹೆಚ್ಚುವರಿಯಾಗಿ ನೀಡಲಾಗುವುದು.
ಬೆಲೆ ಏರಿಕೆಯನ್ನು ಸರಿದೂಗಿಸಲು ಈ ವರ್ಷದ ಜುಲೈ 1ರಿಂದ ಈ ಹೆಚ್ಚಳವು ಪೂರ್ವಾನ್ವಯವಾಗಲಿದೆ.
ತುಟ್ಟಿ ಭತ್ಯೆ ಮತ್ತು ತುಟ್ಟಿ ಪರಿಹಾರ ಎರಡರ ಹೆಚ್ಚಳದಿಂದಾಗಿ ಬೊಕ್ಕಸದ ಮೇಲೆ ಒಟ್ಟಾರೆಯಾಗಿ ವಾರ್ಷಿಕವಾಗಿ ₹10083.96 ಕೋಟಿ ಹೊರೆ ಬೀಳಲಿದೆ. ಈ ಹೆಚ್ಚಳದಿಂದಾಗಿ ಸುಮಾರು 49.19 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68.72 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಈ ಹೆಚ್ಚಳವು 7ನೇ ಕೇಂದ್ರ ವೇತನ ಆಯೋಗದ ಶಿಫಾರಸುಗಳನ್ನು ಆಧರಿಸಿದ ಸ್ವೀಕೃತ ಸೂತ್ರಕ್ಕೆ ಅನುಗುಣವಾಗಿದೆ ಎಂದೂ ಅದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.