ಹರಿಯಾಣದ ರೋಹ್ಟಕ್‌ನಲ್ಲಿ ಸಾಬರ್ ಡೇರಿ ಘಟಕವನ್ನು ಉದ್ಘಾಟಿಸಿದ ಗೃಹ ಸಚಿವ ಅಮಿತ್ ಶಾ ಅವರನ್ನು ಸನ್ಮಾನಿಸಲಾಯಿತು. ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಈ ವೇಳೆ ಉಪಸ್ಥಿತರಿದ್ದರು
–ಪಿಟಿಐ ಚಿತ್ರ
ರೋಹ್ಟಕ್, ಹರಿಯಾಣ: ‘ಕಳೆದ ಹನ್ನೊಂದು ವರ್ಷಗಳಲ್ಲಿ ಹೈನುಗಾರಿಕಾ ಕ್ಷೇತ್ರವು ದೇಶದಲ್ಲಿ ಗಮನಾರ್ಹ ದಾಪುಗಾಲಿರಿಸಿದ್ದು, ಈ ಅವಧಿಯಲ್ಲಿ ಶೇಕಡಾ 70ರಷ್ಟು ಪ್ರಗತಿ ಸಾಧಿಸಿದೆ. ಈಗ ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಲಯವಾಗಿದೆ’ ಎಂದು ಕೇಂದ್ರ ಗೃಹ ಹಾಗೂ ಸಹಕಾರಿ ಖಾತೆ ಸಚಿವ ಅಮಿತ್ ಶಾ ತಿಳಿಸಿದರು.
₹325 ಕೋಟಿ ವೆಚ್ಚದಲ್ಲಿ ಇಲ್ಲಿ ನಿರ್ಮಿಸಲಾದ ದೇಶದಲ್ಲಿಯೇ ಅತಿ ದೊಡ್ಡದಾದ ‘ಸಾಬರ್ ಡೇರಿ’ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತೀಯ ಹೈನುಗಾರಿಕಾ ವಲಯವು ತನ್ನ ಸಾಮರ್ಥ್ಯವನ್ನು ಶೇಕಡಾ 70ರಷ್ಟು ವೃದ್ಧಿಸಿಕೊಂಡಿದೆ’ ಎಂದು ಹೇಳಿದರು.
‘ಸಹಕಾರಿ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಎಲ್ಲ ರಾಜ್ಯ ಸರ್ಕಾರಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. 2029ರ ಒಳಗಾಗಿ ದೇಶದ ಯಾವ ಗ್ರಾಮ ಪಂಚಾಯಿತಿ ಕೂಡ ಸಹಕಾರಿ ಸಮಿತಿಯಿಂದ ಹೊರಗುಳಿಯುವುದಿಲ್ಲ’ ಎಂದು ಶಾ ಭರವಸೆ ನೀಡಿದರು.
‘2014–15ರಲ್ಲಿ ಹಾಲು ಕೊಡುವ ಪ್ರಾಣಿಗಳು 8.6 ಕೋಟಿಯಷ್ಟಿದ್ದರೆ, ಈಗ 11.2 ಕೋಟಿಗೆ ಏರಿಕೆಯಾಗಿದೆ. ಅದೇ ರೀತಿ, ಹಾಲಿನ ಉತ್ಪಾದನೆಯಲ್ಲಿ 14.6 ಕೋಟಿ ಟನ್‌ಗಳಿಂದ 23.9 ಕೋಟಿ ಟನ್‌ಗೆ ಏರಿಕೆಯಾಗಿದೆ’ ಎಂದರು.
ನೂತನ ‘ಸಾಬರ್ ಡೇರಿ’ ಘಟಕವು ನಿತ್ಯವೂ 150 ಮೆಟ್ರಿಕ್ ಟನ್ ಮೊಸರು, 2 ಲಕ್ಷ ಲೀಟರ್ ಮಜ್ಜಿಗೆ ಹಾಗೂ 10 ಮೆಟ್ರಿಕ್ ಟನ್ ಸಿಹಿ ಉತ್ಪನ್ನಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ. ಗುಜರಾತ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಸಾಬರ್‌ಕಾಂಠಾ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ‘ಸಾಬರ್ ಡೇರಿ’ ಎಂದು ಖ್ಯಾತಿ ಪಡೆದಿದೆ. ಸಾಬರ್ ಡೇರಿಯು ರಾಜಸ್ಥಾನ, ಹರಿಯಾಣ, ಮಹಾರಾಷ್ಟ್ರ, ಪಂಜಾಬ್, ಉತ್ತರಪ್ರದೇಶ ಹಾಗೂ ಬಿಹಾರದಲ್ಲಿಯೂ ಸೇವೆ ನೀಡುತ್ತಿದೆ.
‘ಖಾದಿ ಮಾರುಕಟ್ಟೆ ಮಾಡಲು ಮರೆತ ಕಾಂಗ್ರೆಸ್’
ರೋಹ್ಟಕ್: ‘ಸ್ವಾತಂತ್ರ್ಯ ಬಂದ ಬಳಿಕ ಖಾದಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸುವುದನ್ನು ಕಾಂಗ್ರೆಸ್ ಮರೆಯಿತು. ಮೋದಿ ನೇತೃತ್ವದ ಸರ್ಕಾರದ ನಿರಂತರ ಪ್ರೋತ್ಸಾಹದಿಂದ ‘ಖಾದಿ ಮತ್ತು ಗ್ರಾಮ ಕೈಗಾರಿಕಾ ಆಯೋಗದ ವಹಿವಾಟು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. 2014–15ರಲ್ಲಿ ₹33 ಸಾವಿರ ಕೋಟಿಯಿಂದ ವಹಿವಾಟು ಸದ್ಯ ₹1.70 ಲಕ್ಷ ಕೋಟಿಗೆ ತಲುಪಿದೆ’ ಎಂದು ಗೃಹ ಸಚಿವ ಅಮಿತ್ ಶಾ ತಿಳಿಸಿದರು. ಮಹರ್ಷಿ ದಯಾನಂದ ವಿಶ್ವವಿದ್ಯಾಲಯದಲ್ಲಿ ನಡೆದ ‘ಖಾದಿ ಮಹೋತ್ಸವ’ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ‘ಇಂದು ದೊಡ್ಡ ಕಂಪನಿಗಳು ಕೂಡ ಮಾಡದಷ್ಟು ವಹಿವಾಟು ಅನ್ನು ಖಾದಿ ಸಂಸ್ಥೆಯು ನಡೆಸುತ್ತಿದೆ. ಮೊದಲಿನಿಂದಲೂ ಕಾಂಗ್ರೆಸ್ ಇದೇ ರೀತಿ ನಿಗಾ ಮಾಡಿದ್ದರೆ ಇವತ್ತು ನಿರುದ್ಯೋಗ ಸಮಸ್ಯೆಯೇ ದೇಶದಲ್ಲಿ ಇರುತ್ತಿರಲಿಲ್ಲ’ ಎಂದು ಅಭಿಪ್ರಾಯಪಟ್ಟರು. ‘ಖಾದಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರವು ನಿರ್ಲಕ್ಷ್ಯ ತಳೆದಿತ್ತು. ’ ಎಂದರು. ಕಾರ್ಯಕ್ರಮದಲ್ಲಿ 2200 ಕುಶಲಕರ್ಮಿಗಳಿಗೆ ಟೂಲ್ ಕಿಟ್‌ಗಳನ್ನು ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.