ADVERTISEMENT

ದಲಿತ-ಹಿಂದುಳಿದ ವರ್ಗಗಳು ಸಮಾಜವಾದಿ ಪಕ್ಷದಿಂದ ಏನನ್ನೂ ನಿರೀಕ್ಷಿಸಬಾರದು: ಮಾಯಾವತಿ

ಪಿಟಿಐ
Published 8 ನವೆಂಬರ್ 2021, 10:57 IST
Last Updated 8 ನವೆಂಬರ್ 2021, 10:57 IST
ಬಿಎಸ್‌ಪಿ ವರಿಷ್ಠೆ ಮಾಯಾವತಿ
ಬಿಎಸ್‌ಪಿ ವರಿಷ್ಠೆ ಮಾಯಾವತಿ   

ಲಖನೌ:ದಲಿತರು ಮತ್ತು ಹಿಂದುಳಿದ ವರ್ಗಗಳಲ್ಲಿ ಹುಟ್ಟಿದ ಮಹಾನ್‌ ನಾಯಕರನ್ನು ಸಮಾಜವಾದಿ ಪಕ್ಷವು (ಎಸ್‌ಪಿ) ಅವಹೇಳನ ಮಾಡಿದೆ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಸೋಮವಾರ ಆರೋಪಿಸಿದ್ದು, ಈ ವರ್ಗಗಳ ಜನರು ಅಖಿಲೇಶ್‌ ಯಾದವ್‌ ಅವರ ಪಕ್ಷದಿಂದ ಏನನ್ನೂ ನಿರೀಕ್ಷಿಸಬಾರದು ಎಂದು ಹೇಳಿದ್ದಾರೆ.

ಜಾತಿಯ ದ್ವೇಷ ರಾಜಕಾರಣದಿಂದ ರಾಜ್ಯದಲ್ಲಿ ಅನೇಕ ಸಂಸ್ಥೆಗಳು ಮತ್ತು ಯೋಜನೆಗಳ ಹೆಸರನ್ನು ಬದಲಿಸಲಾಗಿದೆ ಎಂದು ಇದೇ ವೇಳೆ ಹೇಳಿದರು.

‘ದಲಿತರು ಮತ್ತು ಹಿಂದುಳಿದ ವರ್ಗಗಳಲ್ಲಿ ಹುಟ್ಟಿದ ಮಹಾನ್‌ ಸಂತರು, ಗುರುಗಳು ಮತ್ತು ಮಹಾಪುರುಷರನ್ನು ಎಸ್‌ಪಿ ಮೊದಲಿನಿಂದಲೂ ಅವಹೇಳನ ಮಾಡುತ್ತಿದೆ. ಫೈಜಾಬಾದ್‌ ಜಿಲ್ಲೆಯ ಹೊರಗೆ ರಚಿಸಲಾದ ಹೊಸ ಅಂಬೇಡ್ಕರ್‌ ನಗರ ಜಿಲ್ಲೆಯು ಇದಕ್ಕೆ ತಾಜಾ ಉದಾಹರಣೆ. ಸಂತ ರವಿದಾಸ ನಗರದಿಂದ ಭದೋಹಿ ಎಂಬ ಹೊಸ ಜಿಲ್ಲೆಯನ್ನು ರಚಿಸುವುದನ್ನು ಅವರು (ಎಸ್‌ಪಿ) ವಿರೋಧಿಸಿದರು ಮತ್ತು ಅದರ ಹೆಸರನ್ನೂ ಬದಲಿಸಿದರು’ ಎಂದು ಅವರು ಟ್ವೀಟ್‌ವೊಂದರಲ್ಲಿ ಹೇಳಿದರು.

ADVERTISEMENT

‘ಜಾತಿಯ ದ್ವೇಷ ರಾಜಕಾರಣದಿಂದ ಉತ್ತರ ಪ್ರದೇಶದ ಹಲವು ಸಂಸ್ಥೆಗಳು ಮತ್ತು ಯೋಜನೆಗಳ ಹೆಸರುಗಳನ್ನು ಬದಲಿಸಲಾಗಿದೆ. ಮತ ಗಳಿಕೆಗಾಗಿ ನಾಟಕವಾಡುವ ಎಸ್‌ಪಿಯಿಂದ ಅದರ ಅನುಯಾಯಿಗಳು ಹೇಗೆ ಗೌರವ ಮತ್ತು ಭದ್ರತೆಯನ್ನು ಅಪೇಕ್ಷಿಸುತ್ತಾರೆ?’ ಎಂದು ಅವರು ಪ್ರಶ್ನಿಸಿದರು.

ಇತ್ತೀಚೆಗಷ್ಟೆ ಆರು ಬಿಎಸ್‌ಪಿ ಶಾಸಕರು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡರು. ಎಸ್‌ಪಿ ಭಾನುವಾರ ಅಂಬೇಡ್ಕರ್ ನಗರ ಜಿಲ್ಲೆಯಲ್ಲಿ ನಡೆಸಿದ ಜನಾದೇಶ ಸಭೆಯಲ್ಲಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಬಿಎಸ್‌ಪಿಯ ಹಿರಿಯ ನಾಯಕರಾದ ಲಾಲ್ ಜಿವರ್ಮಾ ಮತ್ತು ರಾಮಾಚಲ ರಾಜ್‌ಭರ್ ಅವರನ್ನು ಔಪಚಾರಿಕವಾಗಿ ಪಕ್ಷಕ್ಕೆ ಸೇರಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.