ADVERTISEMENT

ದಲಿತ ಬಾಲಕಿ ಮೇಲೆ ಅತ್ಯಾಚಾರ ನಡೆದಿಲ್ಲ, ಕತ್ತು ಹಿಸುಕಿ ಕೊಲೆ

ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಉಲ್ಲೇಖ

ಪಿಟಿಐ
Published 2 ಮಾರ್ಚ್ 2021, 7:36 IST
Last Updated 2 ಮಾರ್ಚ್ 2021, 7:36 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಆಲಿಘರ್‌: ‘ಉತ್ತರಪ್ರದೇಶದ ಆಲಿಘರ್‌ನ ಗ್ರಾಮವೊಂದರ ಬಳಿ ಭಾನುವಾರ ಪತ್ತೆಯಾಗಿದ್ದ ದಲಿತ ಬಾಲಕಿಯ ಶವ ಪರೀಕ್ಷೆಯ ವರದಿ ಬಂದಿದ್ದು, ಅತ್ಯಾಚಾರದ ಯಾವುದೇ ಸ್ಪಷ್ಟ ಪುರಾವೆಗಳಿಲ್ಲ. ಆದರೆ, ಬಾಲಕಿಯನ್ನು ಕತ್ತು ಹಿಸುಕಿ ಸಾಯಿಸಲಾಗಿದೆ ಎಂಬುದು ವರದಿಯಿಂದ ತಿಳಿದುಬಂದಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ಈ ಪ್ರಕರಣ ಸಂಬಂಧ ಐವರನ್ನು ವಿಚಾರಣೆಗೆ ಒಳಪಡಿಸಲಾಗಿದೆ’ ಎಂದು ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿ(ಎಸ್ಎಸ್‌ಪಿ) ಮುನಿರಾಜ್‌ ಅವರು ತಿಳಿಸಿದರು.

ಭಾನುವಾರ 16 ವರ್ಷದ ಬಾಲಕಿಯ ಶವಅಕ್ರಾಬಾದ್ ಪ್ರದೇಶದಲ್ಲಿ ಪತ್ತೆಯಾಗಿತ್ತು.ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ತೆಗೆದುಕೊಂಡು ಹೋಗುತ್ತಿರುವಾಗ ಗ್ರಾಮಸ್ಥರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಈ ವೇಳೆ ಇನ್‌ಸ್ಪೆಕ್ಟರ್‌ ಪ್ರಣೇಂದ್ರ ಕುಮಾರ್ ಅವರು ಗಾಯಗೊಂಡಿದ್ದರು.

ADVERTISEMENT

‘ಹತ್ಯೆಗೂ ಮುನ್ನ ಬಾಲಕಿಯ ಮೇಲೆ ಅತ್ಯಾಚಾರವೆಸಗಲಾಗಿದೆ ಎಂದು ಕುಟುಂಬದವರು ದೂರಿದ್ದರು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಅತ್ಯಾಚಾರದ ಯಾವುದೇ ಸ್ಪಷ್ಟ ‍ಪುರಾವೆಗಳು ಸಿಕ್ಕಿಲ್ಲ. ಬಾಲಕಿಯ ಮೈ ಮೇಲೆ ಹಲವು ಗಾಯಗಳಾಗಿವೆ. ಆಕೆಯನ್ನು ಕತ್ತು ಹಿಸುಕಿ ಕೊಲ್ಲಲಾಗಿದೆ’ ಎಂದು ಅವರು ಹೇಳಿದರು.

ಈ ಸಂಬಂಧ ಪ್ರಕರಣವನ್ನು ದಾಖಲಿಸಲಾಗಿದೆ. ಸೋಮವಾರ ಬಾಲಕಿಯ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ‌ಈ ವೇಳೆ ಬಾಲಕಿಯ ಮನೆಯ ಮುಂದೆ ಹಲವಾರು ಪ್ರತಿಭಟನಕಾರರು ಸೇರಿದ್ದರು’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.