ಶಿವಪುರಿ (ಮಧ್ಯಪ್ರದೇಶ): ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿ, ದಲಿತ ಯುವಕನನ್ನು ಮಧ್ಯ ಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ಥಳಿಸಿ ಹತ್ಯೆ ಮಾಡಲಾಗಿದೆ.
ಮೃತ ಯುವಕನನ್ನು ನಾರದ್ ಜಾಟವ್ (30) ಎಂದು ಗುರುತಿಸಲಾಗಿದೆ. ಈ ಸಂಬಂಧ ಗ್ರಾಮದ ಸರಪಂಚ, ಆತನ ಹೆಂಡತಿ, ಮಕ್ಕಳು ಸೇರಿದಂತೆ 8 ಮಂದಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಆರೋಪಿಗಳು ತಲೆ ಮರೆಸಿಕೊಂಡಿದ್ದು, ಪತ್ತೆಗೆ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ವಿವರ: ಶಿವಪುರಿ ಜಿಲ್ಲೆಯ ಇಂದೆರ್‌ಗಢ ಗ್ರಾಮದ ಸರಪಂಚ ಪದಂ ಧಾಕಡ್, ತಮ್ಮ ಹೋಟೆಲ್‌ಗೆ ಜಾಟವ್ ಅವರ ಜಮೀನಿನ ಮೂಲಕವೇ ರಸ್ತೆ ನಿರ್ಮಿಸಿಕೊಂಡಿದ್ದರು. ಇದನ್ನು ಜಾಟವ್ ಹಾಗೂ ಅವರ ಮಾವ ಪ್ರಶ್ನಿಸಿದ್ದರು. ನಂತರ, ಧಾಕಡ್ ಅವರ ಹೋಟೆಲ್‌ಗೆ ನೀರು ಸರಬರಾಜು ಮಾಡುತ್ತಿದ್ದ ಪೈಪ್ ಅನ್ನು ತುಂಡರಿಸಿದ್ದರು. ಇದರಿಂದ ಕುಪಿತರಾದ ಧಾಕಡ್, ಸಹಚರರೊಂದಿಗೆ ತೆರಳಿ ಜಾಟವ್ ಅವರಿಗೆ ದೊಣ್ಣೆಯಿಂದ ಥಳಿಸಿದ್ದಾರೆ ಎಂದು ಕೊತ್ವಾಲಿ ಠಾಣೆಯ ಪ್ರಭಾರ ಉಸ್ತುವಾರಿ ಕೃಪಾಲ್ ಸಿಂಗ್ ರಾಥೋಡ್ ತಿಳಿಸಿದ್ದಾರೆ.
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್ ಅವರು ಈ ಹತ್ಯೆಯನ್ನು ಖಂಡಿಸಿದ್ದಾರೆ.
‘ಬಿಜೆಪಿ ಆಡಳಿತದಲ್ಲಿ ದಲಿತರು ಹಾಗೂ ಬುಡಕಟ್ಟು ಜನರ ಮೇಲೆ ದೌರ್ಜನ್ಯ ನಡೆಯುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ರಾಜ್ಯದಲ್ಲಿ ದಲಿತರ ಮೇಲೆ ಪ್ರತಿದಿನವೂ ದೌರ್ಜನ್ಯ ನಡೆಯುತ್ತಿವೆ’ ಎಂದು ಆರೋಪಿಸಿದ್ದಾರೆ.
ಶಿವಪುರಿ ಜಿಲ್ಲೆಯಲ್ಲಿ ದಲಿತ ಯುವಕನನ್ನು ಥಳಿಸಿ ಹತ್ಯೆ ಮಾಡಲಾಗಿದೆ. ಮಧ್ಯ ಪ್ರದೇಶದಲ್ಲಿ ದಲಿತರು ಸುಕ್ಷಿತವಾಗಿಲ್ಲ ಎಂಬುದನ್ನು ಇದು ಮತ್ತೆ ರುಜುವಾತು ಮಾಡಿದೆ.-ಕಮಲ್‌ನಾಥ್, ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.