ADVERTISEMENT

ಸಾಮೂಹಿಕ ಅತ್ಯಾಚಾರ | ನಮ್ಮ ಮಗಳ ಜೀವಕ್ಕೆ ಅಪಾಯವಿದೆ: ಸಂತ್ರಸ್ತೆಯ ತಂದೆ ಆರೋಪ

ಬಿಜೆಪಿ–ಟಿಎಂಸಿ ಆರೋಪ–ಪ್ರತ್ಯಾರೋಪ

ಪಿಟಿಐ
Published 13 ಅಕ್ಟೋಬರ್ 2025, 23:30 IST
Last Updated 13 ಅಕ್ಟೋಬರ್ 2025, 23:30 IST
<div class="paragraphs"><p>ವೈದ್ಯ ವಿದ್ಯಾರ್ಥಿನಿಯ ಮೇಲಿನ ಸಾಮೂಹಿಕ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿ ಎಬಿವಿಪಿ ಸದಸ್ಯರು ಕೋಲ್ಕತ್ತದಲ್ಲಿ ಸೋಮವಾರ ಪ್ರತಿಕೃತಿ ದಹಿಸಿ, ಪ್ರತಿಭಟಿಸಿದರು –</p></div>

ವೈದ್ಯ ವಿದ್ಯಾರ್ಥಿನಿಯ ಮೇಲಿನ ಸಾಮೂಹಿಕ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿ ಎಬಿವಿಪಿ ಸದಸ್ಯರು ಕೋಲ್ಕತ್ತದಲ್ಲಿ ಸೋಮವಾರ ಪ್ರತಿಕೃತಿ ದಹಿಸಿ, ಪ್ರತಿಭಟಿಸಿದರು –

   

ಪಿಟಿಐ ಚಿತ್ರ

ಭುವನೇಶ್ವರ/ಕೋಲ್ಕತ್ತ: ಪಶ್ಚಿಮ ಬಂಗಳಾದ ದುರ್ಗಾಪುರದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಎರಡನೇ ವರ್ಷದ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದಿದೆ ಎನ್ನಲಾದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ, ‘ನನ್ನ ಮಗಳ ಜೀವಕ್ಕೆ ಅಪಾಯವಿದೆ’ ಎಂದು ಸಂತ್ರಸ್ತೆಯ ತಂದೆ ಸೋಮವಾರ ಆರೋಪಿಸಿದ್ದಾರೆ.

ADVERTISEMENT

‘ಪಶ್ಚಿಮ ಬಂಗಾಳದಲ್ಲಿ ನನ್ನ ಮಗಳು ಸುರಕ್ಷಿತವಾಗಿ ಇರುತ್ತಾಳೆ ಎನ್ನುವ ಬಗ್ಗೆ ನಮಗೆ ನಂಬಿಕೆ ಇಲ್ಲ. ಯಾರನ್ನೂ ನಂಬುವ ಸ್ಥಿತಿಯಲ್ಲಿ ನಾವಿಲ್ಲ. ಆದ್ದರಿಂದ ಮಗಳನ್ನು ಭುವನೇಶ್ವರಕ್ಕೆ ಕರೆತರಲು ಸಹಕರಿಸಿ’ ಎಂದು ಮುಖ್ಯಮಂತ್ರಿ ಮೋಹನ್‌ ಚರಣ್‌ ಮಾಂಝಿ ಅವರಲ್ಲಿ ಸಂತ್ರಸ್ತೆ ತಂದೆ ಮನವಿ ಮಾಡಿದ್ದಾರೆ.

‘ಅವರನ್ನು (ಯಾರ ಹೆಸರನ್ನೂ ಹೇಳಲಿಲ್ಲ) ನನ್ನ ಮಗಳನ್ನು ಕೊಂದು ಬಿಡುತ್ತಾರೆ. ಆಕೆಯ ಆರೋಗ್ಯ ಈಗ ತುಸು ಸುಧಾರಿಸುತ್ತಿದೆ. ನಾನು ದುರ್ಗಾಪುರದಲ್ಲಿ ಅಡಗಿ ಕುಳಿತಿದ್ದೇನೆ. ಮಧುಮೇಹ ಇರುವ ನನ್ನ ಪತ್ನಿಯು ಆಸ್ಪತ್ರೆಯಲ್ಲಿ ಮಗಳ ಹಾಸಿಗೆ ಪಕ್ಕದಲ್ಲಿಯೇ ಕುಳಿತಿದ್ದಾಳೆ’ ಎಂದರು.

‘ಘಟನೆ ನಡೆದ 36 ಗಂಟೆಗಳ ಒಳಗೆ ಇಲ್ಲಿನ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ತನಿಖೆಯಿಂದ ನಾವು ತೃಪ್ತರಾಗಿದ್ದೇವೆ. ಸಂತ್ರಸ್ತೆಗೆ ನ್ಯಾಯ ದೊರಕಲಿದೆ ಎಂಬ ನಂಬಿಕೆ ಇದೆ’ ಎಂದು ಒಡಿಶಾದ ಬಾಲೇಶ್ವರದ ಹೆಚ್ಚುವರಿ ಜಿಲ್ಲಾಧಿಕಾರಿ ಹೇಮಂತ್‌ ಸಿಂಗ್‌ ಹೇಳಿದರು. ಬಾಲೇಶ್ವರ ಜಿಲ್ಲಾಡಳಿತದಿಂದ ನಾಲ್ವರ ತಂಡವು ಸಂತ್ರಸ್ತೆಯನ್ನು, ಆಕೆಯ ಕುಟುಂಬವನ್ನು ಭೇಟಿ ಮಾಡಿತ್ತು.

ಆರೋಪ–ಪ್ರತ್ಯಾರೋಪ: ‘ಮಹಿಳೆಯರ ಸುರಕ್ಷತೆ ವಿಚಾರದಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ’ ಎಂದು ಬಿಜೆಪಿ ದೂರಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಟಿಎಂಸಿ, ‘ನಮ್ಮ ‘ಅಪರಾಜಿತ ಮಸೂದೆ’ಯು ಜಾರಿಯಾದಂತೆ ನರೇಂದ್ರ ಮೋದಿ ಸರ್ಕಾರ ತಡೆದು ಹಿಡಿದಿದೆ’ ಎಂದಿದೆ.

ಸೋಮವಾರದ ಬೆಳವಣಿಗೆ

  • ಪ್ರಕರಣಕ್ಕೆ ಸಂಬಂಧಿಸಿ ಸೋಮವಾರ ಮತ್ತಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇವರನ್ನು 9 ದಿನಗಳವರೆಗೆ ಪೊಲೀಸ್‌ ವಶಕ್ಕೆ ನ್ಯಾಯಾಲಯ ನೀಡಿದೆ. ಅಲ್ಲಿಗೆ ಬಂಧಿತರ ಒಟ್ಟು ಸಂಖ್ಯೆ ಐದಕ್ಕೆ ಏರಿದೆ. ಉಳಿದ ಮೂವರನ್ನು 10 ದಿನಗಳವರೆಗೆ ಪೊಲೀಸ್ ವಶಕ್ಕೆ ನೀಡಲಾಗಿತ್ತು

  • ಪ್ರಕರಣಕ್ಕೆ ಸಂಬಂಧಿಸಿ ‘ಸಾಕ್ಷ್ಯ ನಾಶ’ ನಡೆಯುತ್ತಿದ್ದೆ. ಐವರನ್ನು ಬಂಧಿಸಿರುವುದು ಕಣ್ಣೊರೆಸುವ ತಂತ್ರ ಎಂದು ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ದೂರಿದ್ದಾರೆ

  • ಒಡಿಶಾ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಶೋಬನಾ ಮೊಹಂತಿ ಅವರು ಸಂತ್ರಸ್ತೆಯನ್ನು ಭೇಟಿ ಮಾಡಲು ದುರ್ಗಾಪುರಕ್ಕೆ ಸೋಮವಾರ ತೆರಳಿದರು

  • ‘ಇದೊಂದು ಅತ್ಯಂತ ಆಘಾತಕಾರಿ ಘಟನೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಇಂಥ ಘಟನೆ ನಡೆಯುತ್ತಿಲ್ಲ. ಭವಿಷ್ಯದಲ್ಲಿ ಇಂಥದ್ದು ನಡೆಯದಂತೆ ಕ್ರಮ ಕೈಗೊಳ್ಳಬೇಕು. ಸಂತ್ರಸ್ತೆಯನ್ನು ಭೇಟಿಯಾದ ಬಳಿಕ ರಾಜ್ಯದ ಕಾನೂನು ಸುವ್ಯವಸ್ಥೆ ಕುರಿತು ಮಾತನಾಡುತ್ತೇನೆ’ ಎಂದು ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ್‌ ಬೋಸ್‌ ಹೇಳಿದರು

ಮಮತಾ ಹೇಳಿಕೆ: ವ್ಯಾಪಕ ಆಕ್ರೋಶ

ರಾತ್ರಿ ವೇಳೆ ಹೇಗೆ ಹೊರಹೋದಳು?

ರಾತ್ರಿ 12.30ಕ್ಕೆ ಆಕೆ ಹೇಗೆ ಹೊರ ಹೋದಳು? ಹಾಸ್ಟೆಲ್‌ಗಳಲ್ಲಿ ಉಳಿದುಕೊಂಡಿರುವ ವಿದ್ಯಾರ್ಥಿಗಳು ಅದರಲ್ಲಿಯೂ ಇತರೆ ರಾಜ್ಯಗಳಿಂದ ಪಶ್ಚಿಮ ಬಂಗಾಳಕ್ಕೆ ವ್ಯಾಸಂಗಕ್ಕಾಗಿ ಬರುವವರು ಹಾಸ್ಟೆಲ್‌ಗಳ ನಿಯಮಗಳನ್ನು ಪಾಲಿಸಬೇಕು. ಎಲ್ಲಿಗೆ ಬೇಕಾದರೂ ಹೋಗುವ ಮೂಲಭೂತ ಹಕ್ಕು ಇದ್ದರೂ ಯಾರೂ ರಾತ್ರಿ ವೇಳೆ ಹೊರಗೆ ಹೋಗಬಾರದು.
– ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ

‘ಪ್ರಕರಣ ಮುಚ್ಚಿ ಹಾಕುವಂಥಾ ಹೇಳಿಕೆ’

ನನ್ನ ಮಗಳು ಮಧ್ಯ ರಾತ್ರಿ ಹೊರಗೆ ಹೋಗಿರಲಿಲ್ಲ. ಮಮತಾ ಅವರ ಈ ಹೇಳಿಕೆಯು ಸಂಪೂರ್ಣ ಸುಳ್ಳು. ಆಕೆ ಹೊರ ಹೋಗುವಾದ ರಾತ್ರಿ 8 ಗಂಟೆಯಾಗಿತ್ತಷ್ಟೆ. ಅವರ ಹೇಳಿಕೆಯು ಪ್ರಕರಣವನ್ನು ಮುಚ್ಚಿ ಹಾಕುವ ಯತ್ನದಂತೆ ಕಾಣುತ್ತಿದೆ. ನನ್ನ ಮಗಳು ಸ್ನೇಹಿತನೊಂದಿಗೆ ಹೊರಹೋಗಿದ್ದಳು. ದಾಳಿಕೋರರು ಬಂದ ಕೂಡಲೇ ಆತ ಓಡಿ ಹೋಗಿದ್ದಾನೆ. ಮಗಳ ಮೇಲೆ ರಾತ್ರಿ 8ರಿಂದ 9ರ ಮಧ್ಯೆ ದಾಳಿ ನಡೆದಿದೆ.
– ಸಂತ್ರಸ್ತೆಯ ತಂದೆ

‘ಲಿಂಗ ತಾರತಮ್ಯದ ಮಾತು’

ದೀದೀ ಎಂದೇ ಕರೆಸಿಕೊಳ್ಳುವ ಮಮತಾ ಅವರಂಥ ನಾಯಕಿಯು ನೀಡಿದ ಹೇಳಿಕೆ ಆಶ್ಚರ್ಯ ತರಿಸಿದೆ ಮತ್ತು ಇದು ಮಹಿಳೆಯರನ್ನು ಅವಮಾನಿಸಿದೆ. ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡುವ ಬದಲು ಅವರು ಲಿಂಗ ತಾರತಮ್ಯದ ಮಾತುಗಳನ್ನಾಡಿದ್ದಾರೆ. ನಿಮಗೆ ಒಡಿಶಾದ ಹುಡುಗಿಯ ಬಗ್ಗೆ ಕರುಣೆ ಇಲ್ಲವಾದರೆ ನಮ್ಮ ಸರ್ಕಾರಕ್ಕೆ ಪತ್ರ ಬರೆಯಿರಿ. ನಿಮ್ಮ ರಾಜ್ಯದಲ್ಲಿದ್ದರೂ ನಮಗೆ ನಮ್ಮ ಹುಡುಗಿಯ ಕಷ್ಟ ಅರ್ಥವಾಗುತ್ತದೆ.,
– ಪ್ರವತಿ ಪರಿದಾ, ಒಡಿಶಾ ಉಪ ಮುಖ್ಯಮಂತ್ರಿ

ಮಹಿಳೆಯೇ ಎಚ್ಚರಿಂದ ಇರಬೇಕು

ಪೊಲೀಸರು ಎಲ್ಲ ರಸ್ತೆಗಳಲ್ಲಿಯೂ ಇರಲು ಸಾಧ್ಯವಿಲ್ಲ. ಘಟನೆ ನಡೆದ ಬಳಿಕವಷ್ಟೇ ಪೊಲೀಸರು ಕ್ರಮ ಕೈಗೊಳ್ಳಲು ಸಾಧ್ಯ. ಆದ್ದರಿಂದ ಮಹಿಳೆಯರು ರಾತ್ರಿ ಹೊತ್ತಿನಲ್ಲಿ ಕಾಲೇಜುಗಳಿಂದ ಹೊರಬರಬಾರದು ಮತ್ತು ಮಹಿಳೆಯರೇ ಎಚ್ಚರದಿಂದ ಇರಬೇಕು.
– ಸೌಗತ್‌ ರಾಯ್‌, ಟಿಎಂಸಿ ಸಂಸದ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಅವರ ಹೇಳಿಕೆಗೆ ದೇಶದಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿದೆ. ಸಂತ್ರೆಸ್ತೆಯ ತಂದೆ ಕೂಡ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಹಾಗೂ ಟಿಎಂಸಿ ನಾಯಕರ ಮಧ್ಯೆ ಆರೋಪ ಪ್ರತ್ಯಾರೋಪಗಳೂ ನಡೆದಿವೆ.

‘ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ’ ಎಂದು ಮಮತಾ ಅವರು ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.