ADVERTISEMENT

ವೇಮುಲ ಸ್ಮರಣೆ: ವಿಶ್ವವಿದ್ಯಾಲಯಗಳಲ್ಲಿ ದಲಿತರ ಸ್ಥಿತಿ ಇನ್ನೂ ಬದಲಾಗಿಲ್ಲ; ರಾಹುಲ್

ಏಜೆನ್ಸೀಸ್
Published 17 ಜನವರಿ 2026, 11:18 IST
Last Updated 17 ಜನವರಿ 2026, 11:18 IST
<div class="paragraphs"><p>ರಾಹುಲ್ ಗಾಂಧಿ</p></div>

ರಾಹುಲ್ ಗಾಂಧಿ

   

ನವದೆಹಲಿ: ವಿಶ್ವವಿದ್ಯಾಲಯಗಳಲ್ಲಿ ದಲಿತ ಯುವಕರ ಸ್ಥಿತಿ ಇನ್ನೂ ಬದಲಾಗಿಲ್ಲ, ತಾರತಮ್ಯ ಜೀವಂತವಾಗಿದ್ದು ಇದಕ್ಕೆ ಕಾನೂನಿನ ಅಗತ್ಯವಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ 26 ವರ್ಷದ ದಲಿತ ವಿದ್ಯಾರ್ಥಿ ರೋಹಿತ್ ವೇಮುಲ, ಕಿರುಕುಳ ಆರೋಪದ ಹಿನ್ನೆಲೆಯಲ್ಲಿ 2016ರ ಜನವರಿ 17ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು.

ADVERTISEMENT

ರೋಹಿತ್ ವೇಮುಲ ಅವರ 10ನೇ ಸ್ಮರಣ ದಿನವಾದ ಇಂದು (ಶನಿವಾರ) ಅವರ ನೆನೆದು ಮತ್ತು ಉನ್ನತ ವ್ಯಾಸಂಗದಲ್ಲಿ ದಲಿತ ವಿದ್ಯಾರ್ಥಿಗಳ ಸ್ಥಿತಿಗತಿಗಳ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ರಾಹುಲ್ ಗಾಂಧಿ ಪೋಸ್ಟ್‌ ಹಂಚಿಕೊಂಡಿದ್ದಾರೆ. 

ಇಂದಿಗೆ ರೋಹಿತ್ ವೇಮುಲ ನಮ್ಮನ್ನು ಅಗಲಿ 10 ವರ್ಷಗಳು ಸಂದಿವೆ, ಆದರೆ ಅವರು ಬಿಟ್ಟುಹೋದ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ, ಈ ದೇಶದಲ್ಲಿ ಪ್ರತಿಯೊಬ್ಬರಿಗೂ ಕನಸು ಕಾಣುವ ಸಮಾನ ಹಕ್ಕು ಇದೆಯೇ? ಎಂದು ರಾಹುಲ್‌ ಪ್ರಶ್ನಿಸಿದ್ದಾರೆ.

ರೋಹಿತ್ ಓದಲು ಬಯಸಿದ್ದರು, ಬರೆಯಲು ಬಯಸಿದ್ದರು, ವಿಜ್ಞಾನ, ಸಮಾಜ ಮತ್ತು ಮಾನವೀಯತೆಯನ್ನು ಅರಿತು ಈ ದೇಶವನ್ನು ಉತ್ತಮಗೊಳಿಸಲು ಅವರು ಇಚ್ಛಿಸಿದ್ದರು. ಆದರೆ, ದಲಿತರ ಪ್ರಗತಿಯನ್ನು ಈ ವ್ಯವಸ್ಥೆ ಸಹಿಸಿಕೊಳ್ಳಲಿಲ್ಲ ಎಂದು ಹೇಳಿದ್ದಾರೆ.

ಜಾತಿವಾದ, ಸಾಮಾಜಿಕ ಬಹಿಷ್ಕಾರ, ಅವಮಾನ, ಅಮಾನುಷ ವರ್ತನೆ... ಇವುಗಳು ಒಬ್ಬ ಭರವಸೆಯ ಯುವಕನನ್ನು ಬಲಿ ಪಡೆದವು. ಅಂತಿಮವಾಗಿ ಅವನು ಒಂಟಿಯಾಗಿಬಿಟ್ಟ ಎಂದು ರಾಹುಲ್ ಹೇಳಿದರು.

ಇಂದು ಪರಿಸ್ಥಿತಿ ಏನು ಬದಲಾಗಿದೆ? ಕ್ಯಾಂಪಸ್‌ಗಳಲ್ಲಿ ದಲಿತರ ತಿರಸ್ಕಾರ, ಹಾಸ್ಟೆಲ್‌ಗಳಲ್ಲಿ ಏಕಾಂಗಿ ಬದುಕು, ತರಗತಿಗಳಲ್ಲಿ ತಾರತಮ್ಯ, ಹಿಂಸಾಚಾರ ಮುಂದುವರೆದಿದೆ. ಈ ದೇಶದಲ್ಲಿ ಇನ್ನೂ ಮುಂದೆ ಎಲ್ಲಕ್ಕೂ ಜಾತಿಯೇ ದೊಡ್ಡ ‘ಪ್ರವೇಶ ಪತ್ರ’ವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ದಲಿತ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗದಲ್ಲಿ ಸ್ವಾಭಿಮಾನ ಮೂಡಿಸಲು, ತಾರತಮ್ಯ ಹೋಗಲಾಡಿಸಲು ರೋಹಿತ್ ವೇಮುಲ ಕಾಯ್ದೆ ತರಲು ನಾವು ಬದ್ಧರಾಗಿದ್ದೇವೆ. ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರಗಳು ಈ ಕಾಯ್ದೆಯನ್ನು ಶೀಘ್ರವಾಗಿ ಜಾರಿಗೆ ತರುವ ಪ್ರಕ್ರಿಯೆಯಲ್ಲಿ ತೊಡಗಿವೆ ಎಂದು ಹೇಳಿದರು.

ನಾವು ನ್ಯಾಯಯುತ, ಮಾನವೀಯ ಮತ್ತು ಸಮಾನತೆಯ ಭಾರತವನ್ನು ಬಯಸುತ್ತೇವೆ, ಇಲ್ಲಿ ಯಾವುದೇ ದಲಿತ ವಿದ್ಯಾರ್ಥಿಯ ಕನಸನ್ನು ಕಸಿಯಲು ಸಾಧ್ಯವಿಲ್ಲ. ರೋಹಿತ್, ನಿನ್ನ ಹೋರಾಟ ನಮ್ಮ ಹೊಣೆಗಾರಿಕೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.