ಬಲಿಯಾ: ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಮಗ ನೀರಜ್ ಶೇಖರ್ ಅವರ ಜೊತೆ ಗುರುತಿಸಿಕೊಂಡಿದ್ದ ಬಿಜೆಪಿ ನಾಯಕರೊಬ್ಬರು ದಲಿತ ವಿದ್ವಾಂಸರಿಗೆ ಕೊಲೆ ಬೆದರಿಕೆ ಹಾಕಿದ ಘಟನೆ ವರದಿಯಾಗಿದೆ.
ಬಿಜೆಪಿಯಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನೀರಜ್ ಶೇಖರ್ ಅವರ ನಿಕಟವರ್ತಿಯಾದ ಅಲೋಕ್ ಸಿಂಗ್ ಎನ್ನುವವರು ಲಖನೌ ವಿಶ್ವವಿದ್ಯಾಲಯದ ವಿದ್ವಾಂಸ ದೀಪಕ್ ಕನೌಜಿಯಾ ಅವರಿಗೆ ಕೊಲೆ ಬೆದರಿಕೆ ಹಾಕಿದ್ದು, ಈ ಕುರಿತು ಸೋಮವಾರ ರಾತ್ರಿ ಎಫ್‌ಐಆರ್ ದಾಖಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
‘ಅಲೋಕ್ ಸಿಂಗ್ ಅವರಿಗೆ ನಮ್ಮ ಕುಟುಂಬದ ಜೊತೆಗೆ ರಾಜಕೀಯ ದ್ವೇಷವಿದೆ. ಮೇ.21 ಎಂದು ನನಗೆ ಕರೆ ಮಾಡಿ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದರು’ ಎಂದು ದೀಪಕ್ ಕನೌಜಿಯಾ ಆರೋಪಿಸಿದ್ದಾರೆ.
‘ಈ ಕರೆಯನ್ನು ಬೇಕಿದ್ದರೆ ರೆಕಾರ್ಡ್ ಮಾಡಿಟ್ಟುಕೊಳ್ಳಿ, ಉತ್ತರ ಪ್ರದೇಶದ ಕಾನೂನು ಹಾಗೂ ಆಡಳಿತ ಬಗ್ಗೆ ನನಗೆ ಯಾವುದೇ ಭಯವಿಲ್ಲ’ ಎಂದು ಅಲೋಕ್ ಸಿಂಗ್ ಹೇಳಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
‘ನನ್ನ ತಂದೆಯೂ ಕೂಡ ಇವರ ಸತತ ಕಿರುಕುಳದಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಇದರಿಂದಾಗಿಯೇ ಕಳೆದ ವರ್ಷ ಹೃದಯಾಘಾತದಿಂದ ಮೃತಪಟ್ಟಿದ್ದರು. ಹಳ್ಳಿಯಲ್ಲಿ ವಾಸವಿರುವ ನನ್ನ ತಾಯಿಯನ್ನು ಕೂಡ ಇವರು ಕೊಲೆಮಾಡುವ ಸಂಭವವಿದೆ’ ಎಂದು ಆರೋಪಿಸಿದ್ದಾರೆ.
ಅಲೋಕ್ ಸಿಂಗ್ ಅವರು ಬಿಜೆಪಿ ಜೊತೆ ಗುರುತಿಸಿಕೊಂಡಿದ್ದು, ನೀರಜ್ ಶೇಖರ್ ಅವರ ನಿಕಟವರ್ತಿಯಾಗಿದ್ದಾರೆ ಎಂದು ಬಿಜೆಪಿ ನಾಯಕ ಅರುಣ್ ತಿವಾರಿ ಸ್ಪಷ್ಟಪಡಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಅಲೋಕ್ ಸಿಂಗ್ ಹಾಗೂ ದೀಪಕ್ ಕನೌಜಿಯಾ ಅವರ ನಡುವಿನ ಆಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಲೋಕ್ ಸಿಂಗ್ ಅವರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.