
ಪತ್ತನ್ನಂತಿಟ್ಟ(ಕೇರಳ): ತನಿಖಾ ಮತ್ತು ಟೆಲಿಕಾಂ ಏಜೆನ್ಸಿಗಳು ಮಾತ್ರ ಪಡೆಯಬಹುದಾದ ರಹಸ್ಯ ದತ್ತಾಂಶಗಳನ್ನು ಹ್ಯಾಕ್ ಮಾಡಿದ ಆರೋಪದಡಿ ಕೇರಳದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
‘ಖಚಿತ ಮಾಹಿತಿಯ ಆಧಾರದಲ್ಲಿ, ಅಡೂರಿನ ಜೋಯಲ್ ವಿ. ಜೋಸ್‌ನನ್ನು ಸೈಬರ್ ಪೊಲೀಸರು ವಶಕ್ಕೆ ಪಡೆದಿದ್ದಾರೆ’ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
‘2025ರ ಫೆಬ್ರುವರಿಯಿಂದ ಆರೋಪಿಯು ಮೊಬೈಲ್, ಲ್ಯಾಪ್‌ಟಾಪ್ ಮತ್ತು ಇಂಟರ್‌ನೆಟ್ ವ್ಯವಸ್ಥೆಗಳನ್ನು ಬಳಸಿಕೊಂಡು ಹಣಕ್ಕಾಗಿ ಬೇರೆ ಕಂಪ್ಯೂಟರ್ ಮತ್ತು ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡುತ್ತಿದ್ದ. ಕೆಲ ವ್ಯಕ್ತಿಗಳ ‘ಲೈವ್ ಲೊಕೇಷನ್’ ಮತ್ತು ಅವರ ದೂರವಾಣಿ ಸಂಭಾಷಣೆಯ ದತ್ತಾಂಶಗಳನ್ನು ಸಂಗ್ರಹಿಸುತ್ತಿದ್ದ’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿಯ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಂಡು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಾನೂನಿನ ಅನ್ವಯ ‘ಲೈವ್ ಲೊಕೆಷನ್’ ಮತ್ತು ದೂರವಾಣಿ ಕರೆಯ ಮಾಹಿತಿಯನ್ನು ಪೊಲೀಸರು ಮತ್ತು ಟೆಲಿಕಾಂ ನಿರ್ವಾಹಕರು ಮಾತ್ರ ಪಡೆಯಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.