ADVERTISEMENT

ಬಿಎಲ್‌ಒಗಳಿಗೆ ಬೆದರಿಕೆ: ಸುಪ್ರೀಂ ಕೋರ್ಟ್‌ ಕಳವಳ

ಪರಿಸ್ಥಿತಿ ನಿಭಾಯಿಸದಿದ್ದರೆ ಅರಾಜಕತೆ: ಸುಪ್ರೀಂ ಕೋರ್ಟ್‌

ಪಿಟಿಐ
Published 9 ಡಿಸೆಂಬರ್ 2025, 16:55 IST
Last Updated 9 ಡಿಸೆಂಬರ್ 2025, 16:55 IST
.
.   

ನವದೆಹಲಿ: ಪಶ್ಚಿಮ ಬಂಗಾಳ ಮತ್ತು ಇತರ ರಾಜ್ಯಗಳಲ್ಲಿ ಬೂತ್‌ ಮಟ್ಟದ ಅಧಿಕಾರಿಗಳಿಗೆ (ಬಿಎಲ್‌ಒ) ಬೆದರಿಕೆ ಹಾಕುತ್ತಿರುವ ಪ್ರಕರಣಗಳ ಬಗ್ಗೆ ಸುಪ್ರೀಂ ಕೋರ್ಟ್‌ ಮಂಗಳವಾರ ಕಳವಳ ವ್ಯಕ್ತಪಡಿಸಿದೆ.

‘ಪರಿಸ್ಥಿತಿಯನ್ನು ನಿಭಾಯಿಸದಿದ್ದರೆ, ಅರಾಜಕತೆಗೆ ಕಾರಣವಾಗಲಿದೆ’ ಎಂದೂ ಚುನಾವಣಾ ಆಯೋಗಕ್ಕೆ ಹೇಳಿದೆ.

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್‌ 2) ರಾಜ್ಯ ಸರ್ಕಾರಗಳ ಸಹಕಾರದ ಕೊರತೆ ಬಗ್ಗೆಯೂ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್‌ ಮತ್ತು ಜಾಯ್‌ಮಾಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಕಳವಳ ವ್ಯಕ್ತಪಡಿಸಿತು.

ADVERTISEMENT

‘ವಾಸ್ತವಿಕ ನೆಲೆಗಟ್ಟಿನಲ್ಲಿ ಯಾವುದೇ ತೊಂದರೆಗಳಿಲ್ಲದೆ ಎಸ್‌ಐಆರ್‌ ನಡೆಸಲಾಗುತ್ತಿದೆಯಾ?’ ಎಂಬುದನ್ನು ಖಚಿತಪಡಿಸಿಕೊಳ್ಳಲು ಪೀಠವು ಬಯಸಿದೆ ಎಂದಿತು.

‘ಸಹಕಾರದ ಕೊರತೆ, ಬಿಎಲ್‌ಒಗಳ ಕೆಲಸಕ್ಕೆ ಅಡ್ಡಿಯಾದಂತಹ ನಿದರ್ಶನಗಳನ್ನು ನ್ಯಾಯಪೀಠದ ಗಮನಕ್ಕೆ ತನ್ನಿ. ನಾವು ಸೂಕ್ತ ಆದೇಶ ನೀಡುತ್ತೇವೆ’ ಎಂದು ಆಯೋಗದ ಪರವಾಗಿ ಹಾಜರಾದ ಹಿರಿಯ ವಕೀಲ ರಾಕೇಶ್‌ ದ್ವಿವೇದಿ ಅವರಿಗೆ ತಿಳಿಸಿತು.

‘ರಾಜ್ಯ ಸರ್ಕಾರಗಳು ನಮ್ಮೊಂದಿಗೆ ಸಹಕರಿಸುವ ಜೊತೆಗೆ ರಕ್ಷಣೆ ನೀಡಬೇಕು. ಇದನ್ನು ನಿರಾಕರಿಸಿದರೆ, ಸ್ಥಳೀಯ ಪೊಲೀಸರನ್ನು ಆಯೋಗದ ವ್ಯಾಪ್ತಿಗೆ ತೆಗೆದುಕೊಳ್ಳುವುದನ್ನು ಬಿಟ್ಟು ನಮಗೆ ಬೇರೆ ಆಯ್ಕೆ ಇಲ್ಲ. ಪರಿಸ್ಥಿತಿ ಇನ್ನೂ ಸುಧಾರಿಸದಿದ್ದರೆ ಕೇಂದ್ರದ ಪಡೆಗಳನ್ನು ಕರೆಸಿಕೊಳ್ಳಬೇಕಾಗುತ್ತದೆ’ ಎಂದು ದ್ವಿವೇದಿ ಪೀಠದ ಗಮನಕ್ಕೆ ತಂದರು.

ಚುನಾವಣಾ ಪ್ರಕ್ರಿಯೆ ಆರಂಭವಾಗುವವರೆಗೂ ಆಯೋಗವು ಪೊಲೀಸರನ್ನು ತನ್ನ ವ್ಯಾಪ್ತಿಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಬಾಗ್ಚಿ ಹೇಳಿದರು.

ಎಸ್‌ಐಆರ್‌ ಕೆಲಸದಲ್ಲಿ ತೊಡಗಿರುವ ಬಿಎಲ್‌ಒಗಳು ಮತ್ತು ಇತರ ಅಧಿಕಾರಿಗಳಿಗೆ ಬೆದರಿಕೆ ಹಾಕಿದ ಪ್ರಕರಣಗಳನ್ನು ಎದುರಿಸಲು ಚುನಾವಣಾ ಆಯೋಗಕ್ಕೆ ಎಲ್ಲ ಸಾಂವಿಧಾನಿಕ ಅಧಿಕಾರವಿದೆ ಎಂದು ದ್ವಿವೇದಿ ಪೀಠಕ್ಕೆ ತಿಳಿಸಿದರು.

‘ಮತಗಟ್ಟೆ ಅಧಿಕಾರಿಗಳಿಗೆ ಬೆದರಿಕೆ ಹಾಕುವುದು ತುಂಬಾ ಗಂಭೀರವಾದ ವಿಷಯ’ ಎಂದ ಸಿಜೆಐ ಸೂರ್ಯಕಾಂತ್‌, ‘ಪರಿಸ್ಥಿತಿಯನ್ನು ನಿಭಾಯಿಸಿ, ಇಲ್ಲದಿದ್ದರೆ ಅರಾಜಕತೆಗೆ ಕಾರಣವಾಗುತ್ತದೆ’ ಎಂದು ಆಯೋಗಕ್ಕೆ ಹೇಳಿದರು.

ಎಸ್‌ಐಆರ್‌ ಪೂರ್ಣಗೊಂಡು ಮತದಾರರ ಅಂತಿಮ ಪಟ್ಟಿ ಪ್ರಕಟಿಸುವವರೆಗೂ ರಾಜ್ಯ ಪೊಲೀಸ್ ಅಧಿಕಾರಿಗಳನ್ನು ಚುನಾವಣಾ ಆಯೋಗಕ್ಕೆ ನಿಯೋಜಿಸಲು ನಿರ್ದೇಶನ ನೀಡುವಂತೆ ಸನಾತನಿ ಸಂಘ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌, ಕೇಂದ್ರ ಸರ್ಕಾರ, ಪಶ್ಚಿಮ ಬಂಗಾಳ ಸರ್ಕಾರ ಹಾಗೂ ಆಯೋಗದಿಂದ ಪ್ರತಿಕ್ರಿಯೆ ಕೇಳಿತು.

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪೂರ್ಣಗೊಳ್ಳುವವರೆಗೂ ರಾಜ್ಯದಲ್ಲಿ ಕೇಂದ್ರ ಸಶಸ್ತ್ರ ಪಡೆಗಳನ್ನು ನಿಯೋಜಿಸುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ.

ಬಿಎಲ್‌ಒಗಳು ಮತ್ತು ಎಸ್‌ಐಆರ್‌ನಲ್ಲಿ ತೊಡಗಿರುವ ಇತರ ಅಧಿಕಾರಿಗಳಿಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಅರ್ಜಿದಾರರು ಆರೋಪಿಸಿದ್ದು, ಚುನಾವಣಾ ಕೆಲಸ ಮಾಡುತ್ತಿರುವ ಅಧಿಕಾರಿಗಳನ್ನು ರಕ್ಷಿಸಲು ಆಯೋಗಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರ ‍ಪರ ಹಾಜರಾದ ಹಿರಿಯ ವಕೀಲ ವಿ.ಗಿರಿ ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.