ADVERTISEMENT

ಮಾನಹಾನಿ ಪ್ರಕರಣ: ರಾಹುಲ್‌ ಗಾಂಧಿಗಿಲ್ಲ ಮಧ್ಯಂತರ ರಕ್ಷಣೆ

ಬೇಸಿಗೆ ರಜೆ ಬಳಿಕವೇ ತೀರ್ಪು: ಗುಜರಾತ್‌ ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 2 ಮೇ 2023, 15:45 IST
Last Updated 2 ಮೇ 2023, 15:45 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ಅಹಮದಾಬಾದ್‌ (ಗುಜರಾತ್‌): ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಮಾನಹಾನಿ ಪ್ರಕರಣದಲ್ಲಿ ಮಧ್ಯಂತರ ರಕ್ಷಣೆ ನೀಡಲು ಗುಜರಾತ್‌ ಹೈಕೋರ್ಟ್‌ ಮಂಗಳವಾರ ನಿರಾಕರಿಸಿದೆ.

ರಾಹುಲ್ ಅವರು ಮೋದಿ ಉಪನಾಮದ ಕುರಿತು 2019ರಲ್ಲಿ ನೀಡಿದ್ದ ಹೇಳಿಕೆಗೆ ಸಂಬಂಧಿಸಿ ಸೂರತ್‌ನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವೊಂದು ಅವರಿಗೆ ಎರಡು ವರ್ಷ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಅವರು ಮೇಲ್ಮನವಿ ಸಲ್ಲಿಸಿದ್ದರು.

ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್‌ ‌ಪ್ರಚ್ಚಕ್‌ ಅವರಿದ್ದ ಏಕಸದಸ್ಯ ಪೀಠವು ಬೇಸಿಗೆ ರಜೆಯ (ಮೇ 5ರಿಂದ ಜೂನ್ 4) ನಂತರ ಅಂತಿಮ ತೀರ್ಪು ಪ್ರಕಟಿಸುವುದಾಗಿ ಹೇಳಿದೆ. 

ADVERTISEMENT

‘ನ್ಯಾಯದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಅರ್ಜಿಯ ವಿಚಾರಣೆ ನಡೆಸಲಾಗಿದೆ. ಮಧ್ಯಂತರ ರಕ್ಷಣೆಯನ್ನು ಈ ಹಂತದಲ್ಲಿ ನೀಡುವುದಕ್ಕೆ ಸಾಧ್ಯವೇ ಇಲ್ಲ. ಹೀಗಾಗಿ ಅರ್ಜಿದಾರರ ಮನವಿ ತಿರಸ್ಕೃತಗೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಹಾಗೂ ವಿಚಾರಣಾ ಪ್ರಕ್ರಿಯೆಯ ಮಾಹಿತಿಯನ್ನು ಸೂರತ್‌ನ ಜಿಲ್ಲಾ ನ್ಯಾಯಾಲಯದಿಂದ ತರಿಸಿಕೊಳ್ಳುವಂತೆ ರಿಜಿಸ್ಟ್ರಿ ಕಚೇರಿಗೆ ನಿರ್ದೇಶಿಸಲಾಗಿದೆ. ಇವು ಇದೇ 15ರ ಒಳಗಾಗಿ ಹೈಕೋರ್ಟ್‌ಗೆ ಲಭ್ಯವಿರಬೇಕು’ ಎಂದು ಏಕಸದಸ್ಯ ಪೀಠ ತಿಳಿಸಿದೆ.

ರಾಹುಲ್‌ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ವಕೀಲ ಅಭಿಷೇಕ್‌ ಮನು ಸಿಂಘ್ವಿ, ‘ಹೈಕೋರ್ಟ್‌ಗೆ ಒಂದು ತಿಂಗಳು ಬೇಸಿಗೆ ರಜೆ ಇರುವುದರಿಂದಾಗಿ ಪ್ರಕರಣದ ಅಂತಿಮ ಆದೇಶ ಪ್ರಕಟಿಸಬೇಕು. ಇಲ್ಲವೇ ತಮ್ಮ ಕಕ್ಷಿದಾರರಿಗೆ ಮಧ್ಯಂತರ ರಕ್ಷಣೆ ನೀಡಬೇಕು’ ಎಂದು ಮನವಿ ಮಾಡಿದರು. 

‘ನಾನು ವಿದೇಶ ಪ್ರಯಾಣ ಕೈಗೊಳ್ಳುತ್ತಿದ್ದೇನೆ. ಹೀಗಾಗಿ ಬೇಸಿಗೆ ರಜೆ ಬಳಿಕವೇ ಅಂತಿಮ ತೀರ್ಪು ಪ್ರಕಟಿಸಲಾಗುವುದು’ ಎಂದು ನ್ಯಾಯಮೂರ್ತಿ ಹೇಮಂತ್‌ ಹೇಳಿದರು.

‘ಮಾನಹಾನಿ ಪ್ರಕರಣದಲ್ಲಿ ವ್ಯಕ್ತಿಯೊಬ್ಬರಿಗೆ ಗರಿಷ್ಠ ಶಿಕ್ಷೆ ವಿಧಿಸಿರುವುದು ಇದೇ ಮೊದಲು. ರಾಹುಲ್‌ ಅವರ ವಿರುದ್ಧದ ಪ್ರಕರಣವು ಗಂಭೀರವಾದುದಲ್ಲ. ಅದು ಸಮಾಜ ವಿರೋಧಿ ಕೃತ್ಯದ ವ್ಯಾಪ್ತಿಗೂ ಒಳಪಡುವುದಿಲ್ಲ. ಹೀಗಾಗಿ ಶಿಕ್ಷೆಗೆ ತಡೆ ನೀಡಬೇಕು’ ಎಂದೂ ಸಿಂಘ್ವಿ ಕೋರಿದರು. 

ಗುಜರಾತ್‌ನ ಬಿಜೆಪಿ ಶಾಸಕ, ದೂರುದಾರ ಪೂರ್ಣೇಶ್‌ ಮೋದಿ ಪರ ವಕೀಲ ನಿರುಪಮ್‌ ನಾನಾವತಿ ವಾದಿಸಿದರು. ‘ಮೋದಿ ಉಪನಾಮ ಹೊಂದಿರುವವರೆಲ್ಲರೂ ಕಳ್ಳರು ಎಂದು ನೀವು ಹೇಳುತ್ತೀರಿ. ಇದು ನೈತಿಕ ಅಧಃಪತನವಲ್ಲವೇ? ನಿಮ್ಮ ಹೇಳಿಕೆ ಮೂಲಕ ಈ ಜಗತ್ತಿಗೆ ಯಾವ ಸಂದೇಶ ನೀಡುತ್ತಿದ್ದೀರಿ? ವಿರೋಧ ಪಕ್ಷದ ನಾಯಕರಾದವರು ಸಾವಿರಾರು ಜನರ ಮುಂದೆ ತಮ್ಮ ಪ್ರಧಾನಿಯನ್ನು ಕಳ್ಳ ಎಂದು ಬಿಂಬಿಸುವುದು ಸರಿಯೇ? ನೀವು ಪ್ರಯೋಗಿಸಿದ್ದು ಸರಿಯಾದ ಭಾಷೆಯೇ’ ಎಂದು ಪ್ರಶ್ನಿಸಿದರು. 

ತಾವು ಕ್ಷಮೆ ಕೇಳುವುದಿಲ್ಲ ಎಂದು ರಾಹುಲ್‌ ಗಾಂಧಿ ನೀಡಿದ್ದ ಹೇಳಿಕೆಯ ವರದಿಗಳನ್ನು ಉಲ್ಲೇಖಿಸಿದ ನಾನಾವತಿ, ‘ಇದುವೇ ನಿಮ್ಮ ನಿಲುವಾಗಿದ್ದರೆ ಮಧ್ಯಂತರ ತಡೆ ನೀಡುವಂತೆ ಕೋರಿ ಈ ನ್ಯಾಯಾಲಯಕ್ಕೆ ಬರಲೇಬೇಡಿ. ತಮ್ಮ (ರಾಹುಲ್‌) ರಾಜಕೀಯ ಜೀವನ ಅಪಾಯಕ್ಕೆ ಸಿಲುಕಿದೆ ಎಂದು ಅವರು ಅಳಲು ತೋಡಿಕೊಳ್ಳಬಾರದು. ಒಂದೋ ತಮ್ಮ ನಿಲುವಿಗೆ ಬದ್ಧರಾಗಿರಬೇಕು. ಇಲ್ಲವೇ ತಮ್ಮ ಉದ್ದೇಶ ಬೇರೆಯದ್ದೇ ಆಗಿತ್ತು ಎಂದು ಹೇಳಬೇಕು’ ಎಂದೂ ಒತ್ತಾಯಿಸಿದರು.

ಅಪರಾಧ ನಿರ್ಣಯ ಮತ್ತು ಶಿಕ್ಷೆಯನ್ನು ಪ್ರಶ್ನಿಸಿ ರಾಹುಲ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಸೂರತ್‌ನ ಸೆಷನ್ಸ್‌ ನ್ಯಾಯಾಲಯ ವಜಾಗೊಳಿಸಿತ್ತು. ಹೀಗಾಗಿ ರಾಹುಲ್‌ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ನ್ಯಾಯಮೂರ್ತಿ ಗೀತಾ ಗೋಪಿ ಅವರು ಅರ್ಜಿಯ ವಿಚಾರಣೆಯಿಂದ ಹಿಂದೆ ಸರಿದಿದ್ದರಿಂದಾಗಿ ನ್ಯಾಯಮೂರ್ತಿ ಹೇಮಂತ್‌ ಅವರ ಪೀಠದ ಎದುರು ಅರ್ಜಿಯ ವಿಚಾರಣೆಗೆ ನಿಗದಿಯಾಗಿತ್ತು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.