ADVERTISEMENT

ಬಾಧ್ಯತೆ ನಿಭಾಯಿಸುವಲ್ಲಿ ‘ಡಾಸೊ’ ವಿಫಲ

ಸಂಸತ್ತಿಗೆ ವರದಿ ಸಲ್ಲಿಸಿದ ಸಿಎಜಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2020, 16:42 IST
Last Updated 23 ಸೆಪ್ಟೆಂಬರ್ 2020, 16:42 IST
ರಫೇಲ್‌
ರಫೇಲ್‌   

ನವದೆಹಲಿ: ‘ಫ್ರಾನ್ಸ್‌ನ ಶಸ್ತ್ರಾಸ್ತ್ರ ತಯಾರಿಕಾ ಸಂಸ್ಥೆಗಳಾದ ಡಾಸೊ ಏವಿಯೇಶನ್‌ ಹಾಗೂ ಎಂಬಿಡಿಎ ಸಂಸ್ಥೆಗಳು ಭಾರತದ ಜತೆಗೆ ರಫೇಲ್‌ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ಮಾಡಿಕೊಂಡಿದ್ದ ಒಪ್ಪಂದದಲ್ಲಿ ಉಲ್ಲೇಖವಾಗಿರುವ, ವಿದೇಶಿ ಬಾಧ್ಯತೆಯನ್ನು ನಿಭಾಯಿಸುವಲ್ಲಿ ವಿಫಲವಾಗಿವೆ’ ಎಂದು ಸಿಎಜಿಯು ಬುಧವಾರ ಸಂಸತ್ತಿಗೆ ನೀಡಿರುವ ವರದಿಯಲ್ಲಿ ತಿಳಿಸಿದೆ.

ಸಿಎಜಿ ಈ ಕುರಿತು ಪತ್ರಿಕಾ ಹೇಳಿಕೆಯನ್ನು ಸಹ ಬಿಡುಗಡೆ ಮಾಡಿದ್ದು, ಹೆಚ್ಚು ವಿವಾದಕ್ಕೆ ಕಾರಣವಾಗಿದ್ದ, ವಿದೇಶಿ ಪಾಲುದಾರ ಸಂಸ್ಥೆಯ ಆಯ್ಕೆ ವಿಚಾರವಾಗಿ ಅದರಲ್ಲಿ ಯಾವುದೇ ಉಲ್ಲೇಖ ಮಾಡಿಲ್ಲ. ಈ ಖರೀದಿ ಒಪ್ಪಂದದಲ್ಲಿ ವಿದೇಶಿ ಪಾಲುದಾರ ಸಂಸ್ಥೆಯಾಗಿ ಅನಿಲ್‌ ಅಂಬಾನಿ ನೇತೃತ್ವದ ‘ರಿಲಯನ್ಸ್‌ ಡಿಫೆನ್ಸ್‌’ ಸಂಸ್ಥೆಗೆ ಹೆಚ್ಚಿನ ಲಾಭ ಮಾಡಿಕೊಡಲಾಗಿದೆ ಎಂದು ವಿರೋಧಪಕ್ಷಗಳು ಆರೋಪಿಸಿದ್ದವು.

36 ರಫೇಲ್‌ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ 2016ರಲ್ಲಿ ಮಾಡಿಕೊಂಡಿದ್ದ ಒಪ್ಪಂದದ ಪ್ರಕಾರ, ಡಾಸೊ ಏವಿಯೇಶನ್ಸ್‌ ಹಾಗೂ ಎಂಬಿಡಿಎ ಸಂಸ್ಥೆಗಳು ಒಪ್ಪಂದದ ಒಟ್ಟು ಮೊತ್ತದ ಶೇ 30ರಷ್ಟು ಮೌಲ್ಯದ ಉನ್ನತ ತಂತ್ರಜ್ಞಾನವನ್ನು ವಿದೇಶಿ ಬಾಧ್ಯತೆಯ ರೂಪದಲ್ಲಿ ಡಿಆರ್‌ಡಿಒಗೆ ಹಸ್ತಾಂತರಿಸಬೇಕಾಗಿತ್ತು. ಡಿಆರ್‌ಡಿಒ ಸಂಸ್ಥೆಯು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಲಘು ಯುದ್ಧ ವಿಮಾನಕ್ಕಾಗಿ (ಕಾವೇರಿ) ತಂತ್ರಜ್ಞಾನದ ನೆರವು ಪಡೆಯಲು ಇಚ್ಛಿಸಿತ್ತು. ಆದರೆ ಈ ಸಂಸ್ಥೆಗಳು ಈವರೆಗೂ ತಂತ್ರಜ್ಞಾನದ ವರ್ಗಾವಣೆ ಮಾಡಿಲ್ಲ ಎಂದು ವರದಿ ಹೇಳಿದೆ.

ADVERTISEMENT

ಸರಬರಾಜು ಗುತ್ತಿಗೆಗೆ ಅಗತ್ಯವಿರುವ ಅರ್ಹತೆ ಪಡೆಯಲು ಕಂಪನಿಗಳು ವಿದೇಶಿ ಸಂಸ್ಥೆಗಳ ಜೆತೆಗೆ ಒಪ್ಪಂದ ಮಾಡಿಕೊಂಡು, ಆನಂತರ ಅದನ್ನು ಹೇಗೆ ಕಡೆಗಣಿಸುತ್ತವೆ ಎಂಬುದನ್ನೂ ವರದಿಯು ಉಲ್ಲೇಖಿಸಿದೆ. ರಫೇಲ್‌ ಒಪ್ಪಂದದ ಪ್ರಕಾರ ಫ್ರಾನ್ಸ್‌ನ ಎರಡು ಕಂಪನಿಗಳು 2019ರ ಅಕ್ಟೋಬರ್‌ನಿಂದ ತನ್ನ ವಿದೇಶಿ ಬಾಧ್ಯತೆಯನ್ನು ಈಡೇರಿಸಲು (ಭಾರತಕ್ಕೆ ತಂತ್ರಜ್ಞಾನ ಹಸ್ತಾಂತರಿಸಲು) ಆರಂಭಿಸಬೇಕಾಗಿತ್ತು.

ರಫೇಲ್‌ ಒಪ್ಪಂದವು 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ‘ಖರೀದಿ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ’ ಎಂದು ವಿರೋಧಪಕ್ಷಗಳು ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಿದ್ದವು. ‘ವಿದೇಶಿ ಪಾಲುದಾರ ಸಂಸ್ಥೆ ಆಯ್ಕೆಯ ವಿಚಾರದಲ್ಲಿ ತನ್ನ ಪಾತ್ರ ಇಲ್ಲ’ ಎಂದು ಸರ್ಕಾರ ಹೇಳಿಕೊಂಡಿತ್ತು. ಆದರೆ, ಪಾಲುದಾರನ ಆಯ್ಕೆಯ ವಿಚಾರದಲ್ಲಿ ನಮಗೆ ಆಯ್ಕೆಯೇ ಇರಲಿಲ್ಲ ಎಂದು ಫ್ರಾನ್ಸ್‌ನ ಮಾಜಿ ಅಧ್ಯಕ್ಷರು ಹೇಳಿದ್ದರಿಂದ ರಿಲಯನ್ಸ್‌ ಸಂಸ್ಥೆಯ ಪರವಾಗಿ ಸರ್ಕಾರವೇ ಕೆಲಸ ಮಾಡಿದೆ ಎಂಬ ಆರೋಪಗಳು ಬಂದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.