
ನವದೆಹಲಿ: ‘ನ್ಯಾಯಾಂಗವು ಯಾವ ರೀತಿಯ ಮಂತ್ರದಂಡವನ್ನು ಪ್ರಯೋಗಿಸಬೇಕು? ವಾಯು ಗುಣಮಟ್ಟವು ತೀರಾ ಹದಗೆಟ್ಟಿರುವುದು ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶಕ್ಕೆ (ಎನ್‌ಸಿಆರ್) ಮಾರಕ ಎಂದು ತಿಳಿದಿದೆ. ಆದರೆ, ಇದಕ್ಕೆ ಪರಿಹಾರವೇನು’ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್ ಪ್ರಶ್ನಿಸಿದರು.
ದೆಹಲಿ ಮತ್ತು ಎನ್‌ಸಿಆರ್‌ನಲ್ಲಿ ವಾಯು ಗುಣಮಟ್ಟ ಕುಸಿದಿರುವ ಕಾರಣ ಸಲ್ಲಿಸಲಾಗಿರುವ ಅರ್ಜಿಯೊಂದರ ವಿಚಾರಣೆಯನ್ನು ಡಿ.3ರಂದು ನಡೆಸಲು ಸಿಜೆಐ ಮತ್ತು ನ್ಯಾಯಮೂರ್ತಿ ಜಾಯ್‌ಮಾಲ್ಯಾ ಬಾಗ್ಚಿ ಅವರ ಪೀಠವು ಗುರುವಾರ ಒಪ್ಪಿಗೆ ನೀಡಿದೆ. ‘ಈ ವಿಚಾರದ ಬಗ್ಗೆ ನಿರಂತರವಾಗಿಯೇ ಮೇಲ್ವಿಚಾರಣೆ ನಡೆಸಬೇಕು’ ಎಂದಿತು.
‘ವಾಯು ಗುಣಮಟ್ಟ ಎಷ್ಟು ಹದಗೆಟ್ಟಿದೆ ಎಂದರೆ, ದೆಹಲಿ ಮತ್ತು ಎನ್‌ಸಿಆರ್‌ನಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಇದೆ’ ಎಂದು ಹೇಳಿದ ಹಿರಿಯ ವಕೀಲ ಅಪರಾಜಿತ ಸಿಂಗ್ ಅವರ ಮಾತುಗಳನ್ನು ಪೀಠ ಉಲ್ಲೇಖಿಸಿತು. ವಾಯು ಗುಣಮಟ್ಟ ಕುಸಿತದ ಪ್ರಕರಣಗಳಲ್ಲಿ ಈ ಪೀಠಕ್ಕೆ ಅಪರಾಜಿತ ಸಿಂಗ್ ಅವರು ಅಮಿಕಸ್ ಕ್ಯೂರಿಯಾಗಿದ್ದಾರೆ.
‘ನಾವು ಏನು ನಿರ್ದೇಶನ ನೀಡಬೇಕು? ನಾವು ಕೆಲವು ನಿರ್ದೇಶನಗಳನ್ನು ನೀಡುತ್ತೇವೆ ಎಂದಿಟ್ಟುಕೊಳ್ಳಿ... ಆ ತಕ್ಷಣವೇ ನಾವು ಉತ್ತಮ ಗುಣಮಟ್ಟದ ಗಾಳಿಯನ್ನು ಉಸಿರಾಡುತ್ತೇವೆಯೇ? ಸರ್ಕಾರವು ಯಾವ ರೀತಿಯ ಸಮಿತಿಯನ್ನು ರಚಿಸುತ್ತದೆಯೋ ನೋಡೋಣ’ ಎಂದು ಸಿಜೆಐ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.