ADVERTISEMENT

ತೆರವು ಕಾರ್ಯಾಚರಣೆ ವಿರುದ್ಧ ಪ್ರತಿಭಟನೆ; ದೆಹಲಿ ಶಾಸಕ ಅಮಾನತುಲ್ಲಾ ಖಾನ್‌ ಬಂಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಮೇ 2022, 16:15 IST
Last Updated 12 ಮೇ 2022, 16:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮದನ್‌ಪುರ್‌ ಖಾದರ್‌ ಪ್ರದೇಶದಲ್ಲಿ ತೆರವು ಕಾರ್ಯಾಚರಣೆಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಎಎಪಿ ಶಾಸಕ ಅಮಾನತುಲ್ಲಾ ಖಾನ್‌ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಮಹಾನಗರ ಪಾಲಿಕೆ ಅಧಿಕಾರಿಗಳು ಗುರುವಾರ ದೆಹಲಿಯ ಹಲವು ಭಾಗಗಳಲ್ಲಿ ಕೈಗೊಂಡ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆಗೆ ತೀವ್ರ ವಿರೋಧ ವ್ಯಕ್ತವಾಯಿತು.

ಕಾನೂನು ಬದ್ಧವಾಗಿ ನಿರ್ಮಿಸಿರುವ ಕಟ್ಟಡಗಳನ್ನೂ ತೆರವುಗೊಳಿಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದರೆ, ತೆರವು ಕಾರ್ಯಾಚರಣೆಗೆ ತರಲಾಗಿದ್ದ ಬುಲ್ಡೋಜರ್‌ ಅನ್ನು ತಡೆದು ಭದ್ರತಾ ಸಿಬ್ಬಂದಿಯ ಮೇಲೆ ಕಲ್ಲು ತೂರಿರುವುದಾಗಿ ಪೊಲೀಸರು ಹೇಳಿದ್ದಾರೆ.

ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಶಾಸಕ ಅಮಾನತುಲ್ಲಾ ಖಾನ್‌ ಮತ್ತು ಇತರರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಅಮಾನತುಲ್ಲಾ ಅವರನ್ನು ಬಂಧಿಸಿರುವುದಾಗಿ ವರದಿಯಾಗಿದೆ.

ADVERTISEMENT

'ದೆಹಲಿ ಪೊಲೀಸರು ನನ್ನನ್ನು ಬಂಧಿಸಿದ್ದಾರೆ. ನನ್ನನ್ನೂ ಜೈಲಿಗೂ ಕಳುಹಿಸಬಹುದು, ಆದರೆ ನನ್ನ ಆತ್ಮಶಕ್ತಿಯನ್ನಲ್ಲ' ಎಂದು ಅಮಾನತುಲ್ಲಾ ಖಾನ್‌ ಮಧ್ಯಾಹ್ನ ಹಿಂದಿಯಲ್ಲಿ ಟ್ವೀಟಿಸಿದ್ದರು.

ದಕ್ಷಿಣ ದೆಹಲಿ ಮಹಾನಗರ ಪಾಲಿಕೆಯು (ಎಸ್‌ಡಿಎಂಸಿ) ಮದನ್‌ಪುರ್‌ ಖಾದರ್‌, ಧಿರ್ಸೇನ್‌ ಮಾರ್ಗ್‌ನಲ್ಲಿ ಹಾಗೂ ಉತ್ತರ ದೆಹಲಿ ಮಹಾನಗರ ಪಾಲಿಕೆಯು ರೋಹಿಣಿ ಮತ್ತು ಕರೋಲ್‌ ಬಾಗ್‌ಗಳಲ್ಲಿ ತೆರವು ಕಾರ್ಯಾಚರಣೆ ನಡೆಸಿದವು.

ದೆಹಲಿಯ ದಕ್ಷಿಣ, ಉತ್ತರ ಹಾಗೂ ಪೂರ್ವ ಮಹಾನಗರ ಪಾಲಿಕೆಗಳಲ್ಲಿ ಬಿಜೆಪಿ ನೇತೃತ್ವದ ಆಡಳಿತವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.