
ಸ್ಫೋಟದ ಸ್ಥಳ
ಕೃಪೆ: ಪಿಟಿಐ
ನವದೆಹಲಿ: ಎಲ್ಲೆಂದರಲ್ಲಿ ಚದುರಿ ಬಿದ್ದಿರುವ ಮೃತದೇಹದ ಭಾಗಗಳು, ಸುಟ್ಟು ಕರಕಲಾದ ವಾಹನಗಳು, ಆಗಸಕ್ಕೇರಿದ ಕೆಂಪು ಹೊಗೆ, ಬದುಕುಳಿದವರ ಭೀತಿಯ ಕಿರುಚಾಟ, ಗೊಂದಲ, ಗದ್ದಲ... ಇದು ಕೆಂಪುಕೋಟೆ ಮೆಟ್ರೊ ನಿಲ್ದಾಣದ ಬಳಿ ಸೋಮವಾರ ಸಂಜೆ ಸಂಭವಿಸಿದ ಸ್ಫೋಟದ ಕುರಿತು ಪ್ರತ್ಯಕ್ಷದರ್ಶಿಯೊಬ್ಬರು ವರ್ಣಿಸಿದ ರೀತಿ.
‘ನಾನು ಅಲ್ಲಿ ನಿಂತು ಯಾರೊಂದಿಗೋ ಮಾತನಾಡುತ್ತಿದ್ದೆ. ಆಗ ವ್ಯಕ್ತಿಯ ಕೈ (ಶರ್ಟ್ ಇದ್ದಂತೆ) ನನ್ನ ಪಕ್ಕದಲ್ಲಿ ಬಂದು ಬಿದ್ದಿತು. 20 ನಿಮಿಷಗಳಲ್ಲಿ ನಂಬಲಾಗದ ಹಾಗೆ ಸನ್ನಿವೇಶ ಬದಲಾಯಿತು. ಬೃಹತ್ ಸ್ಫೋಟದ ಕೆಲವೇ ಕ್ಷಣಗಳಲ್ಲಿ ಆಗಸದಲ್ಲಿ ಕೆಂಪು ಹೊಗೆ ತುಂಬಿತ್ತು. ಎಲ್ಲರೂ ಭೀತಿಯಿಂದ ರಕ್ಷಣೆಗಾಗಿ ಓಡುತ್ತಿದ್ದರು. ಸ್ಫೋಟ ಎಷ್ಟು ತೀವ್ರವಾಗಿತ್ತೆಂದರೆ ಮನುಷ್ಯರ ದೇಹದ ಭಾಗಗಳು ಎಲ್ಲೆಂದರಲ್ಲಿ ಹಾರಿ ಬೀಳುತ್ತಿದ್ದವು’ ಪ್ರತ್ಯಕ್ಷದರ್ಶಿ ಮುದ್ಗಲ್ ಹೇಳಿದ್ದಾರೆ.
ಜಾಮಾ ಮಸೀದಿಯ ಸಮೀಪದ ಪಾನಿಪೂರಿ ಅಂಗಡಿ ಮಾಲೀಕ ಮನೋಜ್, ‘ಸ್ಫೋಟ ಸಂಭವಿಸಿದ ಕೆಲವೇ ನಿಮಿಷಗಳಲ್ಲಿ ನಾವು ಸ್ಥಳಕ್ಕೆ ಧಾವಿಸಿದೆವು. ಜನರು ಕಿರುಚಾಡುತ್ತಿದ್ದರು. ಕೆಲವರು ಶವವಾಗಿದ್ದರು.. ಒಬ್ಬ ಆಟೊ ಚಾಲಕನಿಗೆ ತೀವ್ರ ಗಾಯವಾಗಿತ್ತು. ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತು‘ ಎಂದರು.
‘ಸ್ಫೋಟ ಸಂಭವಿಸಿದಾಗ ನಾವು ನಿಧಾನವಾಗಿ ಚಲಿಸುತ್ತಿದ್ದೆವು. ಕಿಟಕಿ ಗಾಜು ಒಡೆದುಹೋಯಿತು ಮತ್ತು ನಾವು ಮಾರುಕಟ್ಟೆಯ ಕಡೆಗೆ ಓಡಿದೆವು. ಅದು ತುಂಬಾ ಜನದಟ್ಟಣೆಯಿಂದ ಕೂಡಿತ್ತು. ಏನಾಗುತ್ತಿದೆ ಎಂದು ಯಾರಿಗೂ ತಿಳಿದಿರಲಿಲ್ಲ’ ಎಂದು ವಾಹನ ಚಾಲಕ ಭೂಪಿಂದರ್ ಸಿಂಗ್ ತಿಳಿಸಿದರು.
‘ನನ್ನ ಆಟೊದ ಮುಂದೆ ಸ್ವಿಫ್ಟ್ ಕಾರಿತ್ತು. ಕಾರು ಇದ್ದಕ್ಕಿದ್ದ ಹಾಗೆ ಸ್ಫೋಟಗೊಂಡಿತು’ ಎಂದು ಘಟನೆಯಿಂದ ಗಾಯಗೊಂಡಿರುವ ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
‘ನಾನು ಗುರುದ್ವಾರದಲ್ಲಿದ್ದೆ. ಇದ್ದಕ್ಕಿದ್ದಂತೆ ಭಾರಿ ಶಬ್ದ ಕೇಳಿತು. ಅದೇನು ಎಂದು ನಮಗೆ ತಿಳಿಯಲಿಲ್ಲ. ಆದರೆ, ಅದು ತುಂಬಾ ಜೋರಾದ ಶಬ್ದವಾಗಿತ್ತು’ ಎಂದು ಮತ್ತೊಬ್ಬ ಪ್ರತ್ಯಕ್ಷದರ್ಶಿ ಹೇಳಿದ್ದಾರೆ.
ಚಾಂದಿನಿ ಚೌಕ್‌ನ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸಂಜಯ್ ಭಾರ್ಗವ್, ‘ನನ್ನ ಅಂಗಡಿ ಘಟನೆ ನಡೆದ ಸ್ಥಳದಿಂದ 800 ಮೀಟರ್ ದೂರದಲ್ಲಿದೆ. ಸ್ಫೋಟದಿಂದ ಇಡೀ ಕಟ್ಟಡವೇ ನಡುಗಿತ್ತು. ಇದ್ದಕ್ಕಿದ್ದ ಹಾಗೆ ಮಾರುಕಟ್ಟೆಯಲ್ಲಿ ಭೀತಿಯ ವಾತಾವರಣ ಉಂಟಾಗಿತ್ತು ಮತ್ತು ಜನರು ಎಲ್ಲೆಂದರಲ್ಲಿ ಓಡಲಾರಂಭಿಸಿದ್ದರು’ ಎಂದು ಅವರು ಹೇಳಿದ್ದಾರೆ.
‘ಅಲ್ಲಿನ ದೃಶ್ಯ ಭಯಾನಕವಾಗಿತ್ತು. ತುಂಡಾದ ಕೈಗಳು ಮತ್ತು ಬೆರಳುಗಳು ರಸ್ತೆಯಲ್ಲಿ ಬಿದ್ದಿದ್ದನ್ನು ನೋಡಿದೆ. ಕೈಗಾಡಿ ಎಳೆಯುವವರು ಮತ್ತು ಟ್ಯಾಕ್ಸಿ ಚಾಲಕರು ಸ್ಫೋಟದ ವೇಳೆ ಸ್ಥಳದಲ್ಲಿ ಸಿಲುಕಿದ್ದರು. ಅವರಲ್ಲಿ ಕೆಲವರು ಬದುಕುಳಿಯಲಿಲ್ಲ’ ಎಂದು ಮತ್ತೊಬ್ಬ ಪ್ರತ್ಯಕ್ಷದರ್ಶಿ ಇರ್ಫಾನ್ ವಿವರಿಸಿದ್ದಾರೆ.
ಕಾರು ಮಾಲೀಕ ವಶಕ್ಕೆ
ಸ್ಫೋಟ ಸಂಭವಿಸಿದ ಹುಂಡೈ ಐ–20 ಕಾರಿನ ಮಾಲೀಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಸೋಮವಾರ ರಾತ್ರಿ ತಿಳಿಸಿದರು.
ಕಾರಿನ ಮಾಲೀಕ ಮೊಹಮ್ಮದ್ ಸಲ್ಮಾನ್‌ನನ್ನು ಹರಿಯಾಣದ ಗುರುಗ್ರಾಮದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಲ್ಮಾನ್ ತನ್ನ ಕಾರನ್ನು ಓಖ್ಲಾದಲ್ಲಿರುವ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದ ಎಂದು ಅಧಿಕಾರಿ ತಿಳಿಸಿದ್ದಾರೆ. ಸಲ್ಮಾನ್ ಹೆಸರಿನಲ್ಲಿರುವ ಕಾರು, ಹರಿಯಾಣದ ನೋಂದಣಿ ಸಂಖ್ಯೆ ಹೊಂದಿತ್ತು ಎಂದರು.
‘ಪೊಲೀಸರು ಸಲ್ಮಾನ್‌ನನ್ನು ವಶಕ್ಕೆ ಪಡೆದು ಕಾರಿನ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಆತ ಅದನ್ನು ಓಖ್ಲಾದ ದೇವೇಂದ್ರ ಎಂಬಾತನಿಗೆ ಮಾರಾಟ ಮಾಡಿದ್ದ. ಅದನ್ನು ಮತ್ತೆ ಅಂಬಾಲದ ವ್ಯಕ್ತಿಯೊಬ್ಬನಿಗೆ ಮಾರಾಟ ಮಾಡಲಾಗಿದ್ದು, ಆತನ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ’ ಎಂದು ಹೇಳಿದರು.
ದೇಶದೆಲ್ಲೆಡೆ ಕಟ್ಟೆಚ್ಚರ
ನವದೆಹಲಿ: ಇಲ್ಲಿನ ಕೆಂಪುಕೋಟೆ ಮೆಟ್ರೊ ನಿಲ್ದಾಣದ ಸಮೀಪ ಸೋಮವಾರ ಸಂಜೆ ಸಂಭವಿಸಿದ ಕಾರು ಸ್ಫೋಟದ ಬಳಿಕ ದೇಶದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.
ಪ್ರಮುಖ ಮಹಾನಗರಗಳು, ಪ್ರವಾಸಿ ತಾಣಗಳು, ಧಾರ್ಮಿಕ ಸ್ಥಳಗಳು, ಬಸ್ ನಿಲ್ದಾಣ, ರೈಲು ನಿಲ್ದಾಣ, ಮೆಟ್ರೊ ನಿಲ್ದಾಣ, ಶಾಪಿಂಗ್ ಮಾಲ್ ಹಾಗೂ ಜನಸಂದಣಿ ಇರುವಂತಹ ಸ್ಥಳಗಳಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವಂತೆ ನಗರ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗಳಿಗೆ ಆಯಾ ರಾಜ್ಯ ಸರ್ಕಾರಗಳು ಸಹ ಸೂಚಿಸಿವೆ.
ಕರ್ನಾಟಕ, ಮಹಾರಾಷ್ಟ್ರ, ರಾಜಸ್ಥಾನ, ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಎಲ್ಲೆಡೆ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಕಾರು ಸ್ಫೋಟ ಪ್ರಕರಣದ ಪರಿಸ್ಥಿತಿಯನ್ನು ಅವಲೋಕಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡಿ ಮತ್ತಷ್ಟು ಮಾಹಿತಿ ಪಡೆದರು.
ಅಧಿಕಾರಿಗಳೊಂದಿಗೆ ಶಾ ಚರ್ಚೆ: ದೆಹಲಿ ಪೊಲೀಸ್ ಕಮಿಷನರ್, ಗುಪ್ತಚರ ಬ್ಯೂರೊ ನಿರ್ದೇಶಕರು ಹಾಗೂ ಕೇಂದ್ರ ಗೃಹ ಕಾರ್ಯದರ್ಶಿ ಯೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತುಕತೆ ನಡೆಸುವ ಮೂಲಕ ಕಾರು ಸ್ಫೋಟದ ಬಗ್ಗೆ ಅವಲೋಕಿಸಿದ್ದಾರೆ.
ತ್ವರಿತ ತನಿಖೆಗೆ ‘ಕೈ’ ಆಗ್ರಹ
‘ಕಾರು ಸ್ಫೋಟವು ದುಃಖಕರ ಸಂಗತಿ. ಪ್ರಕರಣದ ಸಮಗ್ರ ಹಾಗೂ ತ್ವರಿತಗತಿಯಲ್ಲಿ ತನಿಖೆ ನಡೆಸಬೇಕು’ ಎಂದು ಕಾಂಗ್ರೆಸ್ ಪಕ್ಷ ಒತ್ತಾಯಿಸಿದೆ.
‘ದೆಹಲಿ ಸರ್ಕಾರದ ಭದ್ರತಾ ವೈಫಲ್ಯವನ್ನು ಈ ಘಟನೆಯು ಎತ್ತಿ ತೋರಿಸುತ್ತದೆ. ಗೃಹ ಸಚಿವಾಲಯ ಹೇಳಿಕೊಳ್ಳುವಂತೆ ದೆಹಲಿಯು ಸುರಕ್ಷಿತ ರಾಜಧಾನಿ ಆಗಿದೆಯೇ’ ಎಂದು ಪ್ರಶ್ನಿಸಿದೆ.
‘ಇಂತಹ ಸಂಕಷ್ಟದ ಸಮಯದಲ್ಲಿ ಇಡೀ ದೇಶ ಒಗ್ಗಟ್ಟಾಗಿ ನಿಲ್ಲಬೇಕು’ ಎಂದು ಹೇಳಿದೆ.
‘ನಾವು ದುಃಖಿತ ಕುಟುಂಬಗಳೊಂದಿಗೆ ನಿಲ್ಲುತ್ತೇವೆ. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳ ಲೆಂದು ಪ್ರಾರ್ಥಿಸುತ್ತೇವೆ’ ಎಂದು ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹೇಳಿದ್ದಾರೆ.
ಆಸ್ಪತ್ರೆಗೆ ಶಾ ಭೇಟಿ
ನವದೆಹಲಿಯ ಎಲ್‌ಎನ್‌ಜೆಪಿ ಆಸ್ಪತ್ರೆಗೆ ಭೇಟಿ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ಘಟನೆ ನಡೆದ ಕೆಲ ಗಂಟೆಗಳ ಬಳಿಕ, ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ವೈದ್ಯರೊಂದಿಗೆ ಭೇಟಿ ನೀಡಿದ ಸಚಿವರು, ಕೆಲ ವಾರ್ಡ್‌ಗಳಿಗೆ ತೆರಳಿ ಗಾಯಾಳುಗಳೊಂದಿಗೆ ಚರ್ಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.