ADVERTISEMENT

ದೆಹಲಿ ಚಲೊ: ರೈತರ ತಡೆಯಲು ಕಂದಕ, ಟಿಪ್ಪರ್

ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಆಗ್ರಹ

ಪಿಟಿಐ
Published 27 ನವೆಂಬರ್ 2020, 21:46 IST
Last Updated 27 ನವೆಂಬರ್ 2020, 21:46 IST
ದೆಹಲಿ ಗಡಿಯ ಸಿಂಘು ಗೇಟ್‌ನಲ್ಲಿ ರೈತರ ಮೆರವಣಿಗೆಯನ್ನು ಪೊಲೀಸರು ತಡೆದು ನಿಲ್ಲಿಸಿದ್ದರು
ದೆಹಲಿ ಗಡಿಯ ಸಿಂಘು ಗೇಟ್‌ನಲ್ಲಿ ರೈತರ ಮೆರವಣಿಗೆಯನ್ನು ಪೊಲೀಸರು ತಡೆದು ನಿಲ್ಲಿಸಿದ್ದರು   

ಸೋನಿಪತ್ / ಗುರುಗ್ರಾಮ / ನವದೆಹಲಿ:ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ‘ದೆಹಲಿ ಚಲೊ’ ಪ್ರತಿಭಟನಾ ಮೆರವಣಿಗೆ ವೇಳೆ ಹರಿಯಾಣದ ಸೋನಿಪತ್‌ನಲ್ಲಿ ರೈತರು ಮತ್ತು ಪೊಲೀಸರ ಮಧ್ಯೆ ಸಂಘರ್ಷ ನಡೆದಿದೆ. ಹರಿಯಾಣ-ದೆಹಲಿ ಗಡಿಯಲ್ಲಿರುವ ಸಿಂಘು ಗೇಟ್‌ನಲ್ಲೂ ಶುಕ್ರವಾರ ಸಂಘರ್ಷ ಉಂಟಾಯಿತು. ಎರಡೂ ಕಡೆ ರೈತರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಲಾಠಿ ಪ್ರಹಾರದಲ್ಲಿ ಹಲವು ರೈತರು ಗಾಯಗೊಂಡಿದ್ದಾರೆ.

ರೈತರ ಮೆರವಣಿಗೆಯನ್ನು ತಡೆಯಲು ದೆಹಲಿ ಪೊಲೀಸರು ಕಂದಕ, ಕಂಟೇನರ್ ಮತ್ತು ಮರಳು ಲಾರಿಗಳ ಮೊರೆ ಹೋಗಿದ್ದರು. ಪಂಜಾಬ್‌ನಿಂದ ಹರಿಯಾಣಕ್ಕೆ ಪ್ರವೇಶಿಸುವ ಹೆದ್ದಾರಿಯ ಗಡಿಗಳಲ್ಲಿ ಹರಿಯಾಣ ಪೊಲೀಸರು ಕಂದಕ ತೋಡಿದ್ದರು. ಕೆಲವೆಡೆ ಹೆದ್ದಾರಿಗೆ ಅಡ್ಡವಾಗಿ ಖಾಲಿ ಕಂಟೇನರ್‌ಗಳನ್ನು ಇರಿಸಿದ್ದರೆ, ಕೆಲವೆಡೆ ಮರಳು ತುಂಬಿದ ಟಿಪ್ಪರ್‌ಗಳನ್ನು ನಿಲ್ಲಿಸಿದ್ದರು. ಹರಿಯಾಣ, ಉತ್ತರ ಪ್ರದೇಶದಿಂದ ದೆಹಲಿಗೆ ಬರುವ ಎಲ್ಲಾ ಹೆದ್ದಾರಿಗಳಲ್ಲಿ ದೆಹಲಿ ಪೊಲೀಸರು ಸಹ ಇಂತಹದ್ದೇ ತಡೆ ನಿರ್ಮಿಸಿದ್ದರು.

ಪಂಜಾಬ್, ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶದಿಂದ ಮೆರವಣಿಗೆಯಲ್ಲಿ ಬಂದಿರುವ ರೈತರು ಈಗ ಹರಿಯಾಣ-ದೆಹಲಿ ಗಡಿ ಸಮೀಪಿಸಿದ್ದಾರೆ. ಬುಧವಾರ ಮಧ್ಯರಾತ್ರಿ ವೇಳೆಗೆ ಸಾವಿರಾರು ರೈತರು ಹರಿಯಾಣದ ಸೋನಿಪತ್‌ ತಲುಪಿದ್ದರು. ಸೋನಿಪತ್‌ನಿಂದ ದೆಹಲಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ಕಾಂಕ್ರೀಟ್‌ ಬ್ಲಾಕ್‌ಗಳನ್ನು ಅಡ್ಡವಾಗಿ ಇರಿಸಲಾಗಿತ್ತು. ರೈತರು ಅವುಗಳನ್ನು ಟ್ರ್ಯಾಕ್ಟರ್‌ಗಳ ಮೂಲಕ ಎಳೆದುಹಾಕಿ ಮುಂದುವರಿದರು. ಕೆಲವೆಡೆ ರಸ್ತೆಗೆ ಅಡ್ಡವಾಗಿ ಇರಿಸಿದ್ದ ಕಂಟೇನರ್‌ಗಳನ್ನು ಸರಿಸಲು ಸಾಧ್ಯವಾಗದೆ ರೈತರು ರಾತ್ರಿಯನ್ನು ಅಲ್ಲಿಯೇ ಕಳೆಯಬೇಕಾಯಿತು. ಇದೇ ವೇಳೆ, ಪೊಲೀಸರು ಮತ್ತು ರೈತರ ಮಧ್ಯೆ ಸಂಘರ್ಷ ನಡೆಯಿತು.

ADVERTISEMENT

ರೈತರು ಪೊಲೀಸರತ್ತ ಕಲ್ಲುತೂರಿದರು. ಪೊಲೀಸರು ರೈತರ ವಿರುದ್ಧ ಜಲಫಿರಂಗಿ ಪ್ರಯೋಗಿಸಿದರು. ಎರಡು ಗಂಟೆಯಷ್ಟು ನಡೆದ ಸಂಘರ್ಷದ ನಂತರ ಮತ್ತಷ್ಟು ರೈತರು ಒಂದಾಗಿ, ಶುಕ್ರವಾರ ಬೆಳಿಗ್ಗೆ ಕಂಟೇನರ್‌ಗಳನ್ನು ತಳ್ಳಿ ದಾರಿ ಮಾಡಿಕೊಂಡರು. ರಸ್ತೆಗಳಲ್ಲಿ ಪೊಲೀಸರು ತೋಡಿದ್ದ ಕಂದಕಗಳನ್ನು ಮುಚ್ಚಿ ಮೆರವಣಿಗೆ ಮುಂದುವರಿಸಿದರು.ರೈತರು ಕಂಟೇನರ್‌ಗಳನ್ನು ತಳ್ಳಿ ದಾರಿಮಾಡಿಕೊಳ್ಳುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮತ್ತೆ ಟೀಕೆ: ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ರೈತರನ್ನು ಕೇಂದ್ರ ಸರ್ಕಾರದ ವಿರುದ್ಧಎತ್ತಿಕಟ್ಟುತ್ತಿದ್ದಾರೆ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಮತ್ತೆ ಆರೋಪಿದ್ದಾರೆ.

ಎರಡು ತಿಂಗಳ ದಿನಸಿ
ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ರಾಜಸ್ಥಾನದ ರೈತರು ದೆಹಲಿಯ ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆ ನಡೆಸಲು ಯೋಜಿಸಿದ್ದಾರೆ. ನೂತನ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವವರೆಗೂದೆಹಲಿಯಲ್ಲಿ ಧರಣಿ ನಡೆಸಲು ರೈತರು ನಿರ್ಧರಿಸಿದ್ದಾರೆ.

ರೈತರ ದೆಹಲಿ ಚಲೋ ಮೆರವಣಿಗೆ ದೆಹಲಿ ಗಡಿಯನ್ನು ಸಮೀಪಿಸಿರುವ ಬೆನ್ನಲ್ಲೇ ಟ್ವಿಟರ್‌ನಲ್ಲಿ #delhichalo ಹ್ಯಾಷ್‌ಟ್ಯಾಗ್‌ ಟ್ರೆಂಡ್ ಆಗಿತ್ತು. ಗುರುವಾರ ಸತತ ಎಂಟು ತಾಸು ಈ ಹ್ಯಾಷ್‌ಟ್ಯಾಗ್‌ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿತ್ತು. ಈಹ್ಯಾಷ್‌ಟ್ಯಾಗ್‌ನಲ್ಲಿ ಈವರೆಗೆ 90 ಸಾವಿರಕ್ಕೂ ಹೆಚ್ಚು ಮಂದಿ ಟ್ವೀಟ್ ಮಾಡಿದ್ದಾರೆ.

ಜಲಫಿರಂಗಿ ಬಳಸಿರುವುದಕ್ಕೆ ತೀವ್ರ ಆಕ್ರೋಶ
ಸೋನಿಪತ್‌ನಲ್ಲಿ ಗುರುವಾರ ಬೆಳಿಗ್ಗೆ 3 ಗಂಟೆಯ ಹೊತ್ತಿಗೆ ಪೊಲೀಸರು ರೈತರ ಮಲೆ ಜಲಫಿರಂಗಿ ಬಳಸಿದ್ದಾರೆ. ಈ ವೇಳೆ ಆ ಪ್ರದೇಶದಲ್ಲಿ 14 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಅಂತಹ ಕೊರೆಯುವ ಚಳಿಯಲ್ಲಿ ರೈತರ ಮೇಲೆ ಪೊಲೀಸರು ಜಲಫಿರಂಗಿ ಹಾರಿಸಿದ್ದಾರೆ. ಇದರಿಂದ ಹಲವು ರೈತರ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ರೈತ ಸಂಘಟನೆಗಳು ಆರೋಪಿಸಿವೆ.

ರೈತರ ಮೇಲೆ ಹರಿಯಾಣ ಮತ್ತು ದೆಹಲಿ ಪೊಲೀಸರು ಜಲಫಿರಂಗಿ ಬಳಸಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ, ರಾಜಕೀಯ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.