ಬಾಂಬ್ ಬೆದರಿಕೆ
(ಸಾಂದರ್ಭಿಕ ಚಿತ್ರ)
ನವದೆಹಲಿ: ದೆಹಲಿಯ ಚಾಣಕ್ಯಪುರಿಯಲ್ಲಿರುವ ಜೀಸಸ್ ಮತ್ತು ಮೇರಿ ಕಾಲೇಜು ಸೇರಿದಂತೆ 20ಕ್ಕೂ ಹೆಚ್ಚು ಕಾಲೇಜುಗಳಿಗೆ ಇ–ಮೇಲ್ ಮೂಲಕ ಬಾಂಬ್ ಬೆದರಿಕೆಗಳು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಸ್ಥಳಕ್ಕೆ ಧಾವಿಸಿದ್ದು, ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆಗಸ್ಟ್ 20ರಂದು ದೆಹಲಿಯ ಶೇ 50ರಷ್ಟು ಶಾಲೆಗಳಿಗೆ ಇ–ಮೇಲ್ ಮೂಲಕ ಬಾಂಬ್ ಬೆದರಿಕೆಗಳು ಬಂದಿದ್ದವು. ಆಗಸ್ಟ್ 18ರಂದು ನಗರದಾದ್ಯಂತ 32 ಶಾಲೆಗಳಿಗೆ ಬಾಂಬ್ ಬೆದರಿಕೆಗಳು ಬಂದಿದ್ದವು. ವಿಚಾರಣೆ ನಂತರ ಅದು ಹುಸಿ ಬೆದರಿಕೆ ಎಂದು ತಿಳಿದು ಬಂದಿತ್ತು.
‘ಟೆರರೈಸರ್ಸ್ 111’ ಎಂದು ಗುರುತಿಸಿಕೊಂಡಿರುವ ಗುಂಪೊಂದು ಡಿಎವಿ ಪಬ್ಲಿಕ್ ಸ್ಕೂಲ್, ಫೇಯ್ತ್ ಅಕಾಡೆಮಿ, ಪಬ್ಲಿಕ್ ಸ್ಕೂಲ್, ಸರ್ವೋದಯ ವಿದ್ಯಾಲಯ ಸೇರಿದಂತೆ ಇತರ ಶಾಲೆಗಳಿಗೆ 25,000 ಅಮೆರಿಕದ ಡಾಲರ್ (ಅಂದಾಜು ₹21.91 ಲಕ್ಷ) ನೀಡುವಂತೆ ಬೇಡಿಕೆ ಇಟ್ಟು ಇ–ಮೇಲ್ ಕಳುಹಿಸಿತ್ತು. ಇದೇ ಗುಂಪು ಆಗಸ್ಟ್ 18ರಂದು ವಿವಿಧ ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದು, 5,000 ಅಮೆರಿಕದ ಡಾಲರ್ (ಅಂದಾಜು ₹4.38 ಲಕ್ಷ) ನೀಡುವಂತೆ ಬೇಡಿಕೆ ಇಟ್ಟಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಗುಂಪು ವಿವಿಧ ಶಾಲೆಗಳ ಪ್ರಾಂಶುಪಾಲರು ಮತ್ತು ಆಡಳಿತ ಸಿಬ್ಬಂದಿಗೆ ಹಲವು ಬಾರಿ ಇ–ಮೇಲ್‌ಗಳನ್ನು ಕಳುಹಿಸಿದ್ದು, ಹಣ ನೀಡದಿದ್ದರೆ 48 ಗಂಟೆಯೊಳಗಾಗಿ ಶಾಲಾ ಆವರಣದಲ್ಲಿ ಬಾಂಬ್ ಸ್ಫೋಟಿಸುವುದಾಗಿ ಹೇಳಿಕೊಂಡಿತ್ತು ಎಂದು ಪೊಲೀಸರು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.