ADVERTISEMENT

1984ರ ಸಿಖ್‌ ವಿರೋಧಿ ಗಲಭೆ: ಒಬ್ಬ ಅಪರಾಧಿಗೆ ಗಲ್ಲು, ಮತ್ತೊಬ್ಬಗೆ ಜೀವಾವಧಿಶಿಕ್ಷೆ

ದೆಹಲಿ ನ್ಯಾಯಾಲಯದಿಂದ ಶಿಕ್ಷೆ ಪ್ರಕಟ

ಪಿಟಿಐ
Published 20 ನವೆಂಬರ್ 2018, 13:58 IST
Last Updated 20 ನವೆಂಬರ್ 2018, 13:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: 1984ರ ಸಿಖ್‌ ವಿರೋಧಿ ಗಲಭೆ ವೇಳೆ ಇಬ್ಬರು ಯುವಕರನ್ನು ಹತ್ಯೆಗೈದ ಅಪರಾಧಿ ಯಶ್‌ಪಾಲ್‌ ಸಿಂಗ್‌ಗೆ ದೆಹಲಿ ನ್ಯಾಯಾಲಯವು ಮಂಗಳವಾರ ಗಲ್ಲುಶಿಕ್ಷೆ ವಿಧಿಸಿದೆ. ಈ ಮೂಲಕ ಸಿಖ್‌ ಗಲಭೆಯಲ್ಲಿ ಗರಿಷ್ಠ ಪ್ರಮಾಣದ ಶಿಕ್ಷೆ ವಿಧಿಸಿದ ಮೊದಲ ಪ್ರಕರಣ ಇದಾಗಿದೆ.

ಹೆಚ್ಚುವರಿ ನ್ಯಾಯಾಧೀಶ ಅಜಯ್‌ ಪಾಂಡೆ ಅವರು ಮಂಗಳವಾರ ತೀರ್ಪು ಪ್ರಕಟಿಸಿದ್ದು, ಈ ಪ್ರಕರಣದ ಮತ್ತೊಬ್ಬ ಅಪರಾಧಿ ನರೇಶ್‌ ಶೇರಾವತ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದೆ.‌

ಅಪರಾಧಿಗಳ ವಿರುದ್ಧ ದೆಹಲಿ ನ್ಯಾಯಾಲಯದ ಆವರಣದಲ್ಲೇ ದಾಳಿ ನಡೆದಿದ್ದ ಕಾರಣ, ತಿಹಾರ್‌ ಜೈಲಿನಲ್ಲೇ ಶಿಕ್ಷೆ ಪ್ರಕಟಿಸಲಾಯಿತು.

ADVERTISEMENT

1984ರ ಏಪ್ರಿಲ್‌ 1ರಂದು ಹರ್‌ದೇವ್‌ಸಿಂಗ್‌ ಮತ್ತು ಇನ್ನಿಬ್ಬರು ಮಹಿಪಾಲಪುರದ ದಿನಸಿ ಅಂಗಡಿಯಲ್ಲಿ ನಿಂತಿದ್ದರು. ಈ ವೇಳೆಗೆ ಅಲ್ಲಿಗೆ ಧಾವಿಸಿದ್ದ 800 ರಿಂದ 1000ದಷ್ಟಿದ್ದ ಉದ್ರಿಕ್ತರ ಗುಂಪು, ಕಬ್ಬಿಣದ ಸಲಾಕೆ, ಕಲ್ಲಿನ ದಾಳಿ ನಡೆಸಿ, ನಂತರ ಅಂಗಡಿಗೆ ಬೆಂಕಿ ಹಚ್ಚಿದ್ದರು.

ಇದರಿಂದ ಹೆದರಿದ ಹರ್‌ದೇವ್‌ಸಿಂಗ್ ಅಲ್ಲಿಂದ ಅವತಾರ್‌ಸಿಂಗ್‌ ಮನೆಗೆ ಓಡಿಹೋಗಿದ್ದರು. ಅಲ್ಲಿಗೂ ಬೆನ್ನತ್ತಿದ ಉದ್ರಿಕ್ತರ ತಂಡ ಇಬ್ಬರಿಗೂ ಬೆಂಕಿಹಚ್ಚಿ ಪರಾರಿಯಾಗಿತ್ತು. ಇದರಿಂದ ಇಬ್ಬರು ಪ್ರಾಣ ಕಳೆದುಕೊಂಡಿದ್ದರು.

ಈ ಪ್ರಕರಣದಲ್ಲಿ ಹೆಚ್ಚಿನ ಸಾಕ್ಷಿ ಅಗತ್ಯವಿದೆ ಎಂದು ತಿಳಿಸಿ 1994ರಲ್ಲಿ ದೆಹಲಿ ಪೊಲೀಸರು ಪ್ರಕರಣವನ್ನು ಕೊನೆಗೊಳಿಸಿದ್ದರು. ಇದಾದ ಬಳಿಕ ವಿಶೇಷ ತನಿಖಾ ತಂಡವು ಈ ಪ್ರಕರಣವನ್ನು ಮತ್ತೆ ತನಿಖೆ ನಡೆಸಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ನವೆಂಬರ್‌ 14ರಂದು ಇಬ್ಬರನ್ನೂ ಅಪರಾಧಿಗಳು ಎಂದು ಘೋಷಿಸಿತ್ತು. ಇದೀಗ ಇಬ್ಬರಿಗೂ ಶಿಕ್ಷೆ ವಿಧಿಸಿದೆ. ಈ ಮೂಲಕ ಎಸ್‌ಐಟಿ ಮರುವಿಚಾರಣೆ ನಡೆಸಿದ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದ ಪ್ರಕರಣ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.