Credit: iStock Photo
ನವದೆಹಲಿ: ಸೌದಿ ಅರೇಬಿಯಾದಲ್ಲಿ ಪವಿತ್ರ ತೀರ್ಥಯಾತ್ರೆ ಮುಗಿಸಿ ಬಂದ ದಿನವೇ ಪಾಪಿ ಪುತ್ರನೊಬ್ಬ ತನಗೆ ಜನ್ಮ ಕೊಟ್ಟ ತಾಯಿಯ ಮೇಲೆಯೇ ಎರಡೆರಡು ಬಾರಿ ಅತ್ಯಾಚಾರ ಎಸಗಿರುವ ಹೀನ ಕೃತ್ಯ ದೆಹಲಿಯಲ್ಲಿ ನಡೆದಿದೆ.
ಘಟನೆ ಸಂಬಂಧ ಸಂತ್ರಸ್ತೆಯು ತನ್ನ ಪತಿ ಮತ್ತು 25 ವರ್ಷದ ಮಗಳೊಂದಿಗೆ ದೆಹಲಿಯ ಹೌಜ್ ಖಾಜಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನನ್ನ ಮಗ 39 ವರ್ಷದ ಎಂಡಿ ಫಿರೋಜ್ ಅಲಿಯಾಸ್ ಸುಹೇಲ್, ಈ ತಿಂಗಳು ಹಲವು ಬಾರಿ ನನ್ನ ಮೇಲೆ ಹಲ್ಲೆ ನಡೆಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ.
ಮೂಲಗಳ ಪ್ರಕಾರ, ಸೌದಿ ಅರೇಬಿಯಾಕ್ಕೆ ಪವಿತ್ರ ತೀರ್ಥಯಾತ್ರೆಗೆ ಹೋಗಿದ್ದ ತನ್ನ ಹೆತ್ತವರನ್ನು ವಾಪಸ್ ಕರೆಸಿದ ನಂತರ ಆರೋಪಿ ಈ ಕೃತ್ಯ ಎಸಗಿದ್ದಾನೆ.
ಆರೋಪಿಯು ಪದವೀಧರನಾಗಿದ್ದರೂ ಪ್ರಸ್ತುತ ನಿರುದ್ಯೋಗಿಯಾಗಿದ್ದಾನೆ. ಸಂತ್ರಸ್ತೆಯು ತನ್ನ ಪತಿ, ಮಗ (ಆರೋಪಿ) ಮತ್ತು ಒಬ್ಬ ಮಗಳೊಂದಿಗೆ ಹೌಜ್ ಖಾಜಿ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಕುಟುಂಬದ ಹಿರಿಯ ಮಗಳು ವಿವಾಹಿತಳಾಗಿದ್ದು, ನೆರೆಹೊರೆಯಲ್ಲಿ ತನ್ನ ಗಂಡನೊಂದಿಗೆ ವಾಸಿಸುತ್ತಿದ್ದಾಳೆ ಎಂದು ತಿಳಿದುಬಂದಿದೆ.
ಜುಲೈ 17ರಂದು ಸಂತ್ರಸ್ತ ಮಹಿಳೆಯು ಪತಿ ಮತ್ತು ಕಿರಿಯ ಮಗಳೊಂದಿಗೆ ಸೌದಿ ಅರೇಬಿಯಾಕ್ಕೆ ತೀರ್ಥಯಾತ್ರೆಗೆ ಹೋಗಿದ್ದರು. ಅವರ ಪ್ರವಾಸದ ಸಮಯದಲ್ಲಿಯೇ, ಆರೋಪಿ ತನ್ನ ತಂದೆಗೆ ಕರೆ ಮಾಡಿ ತಕ್ಷಣ ದೆಹಲಿಗೆ ಹಿಂತಿರುಗುವಂತೆ ಮತ್ತು ತನ್ನ ತಾಯಿಗೆ ವಿಚ್ಛೇದನ ನೀಡುವಂತೆಯೂ ಒತ್ತಾಯಿಸಿದ್ದಾನೆ. ತನ್ನ ಬಾಲ್ಯದಲ್ಲಿ ಆಕೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಆರೋಪಿಸಿದ್ದಾನೆ.
ಆಗಸ್ಟ್ 1ರಂದು ಕುಟುಂಬವು ದೆಹಲಿಗೆ ಹಿಂತಿರುಗಿದ ನಂತರ, ಆರೋಪಿಯು ತನ್ನ ತಾಯಿಯನ್ನು ಕೋಣೆಯಲ್ಲಿ ಕೂಡಿಹಾಕಿದ್ದಾನೆ. ಬಳಿಕ ಆಕೆಯ ಮೇಲೆ ಹಲ್ಲೆ ನಡೆಸಿ, ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದಾದ ಬಳಿಕ ಮಹಿಳೆ ಮನೆ ಬಿಟ್ಟು ತೆರಳಿ ತನ್ನ ಹಿರಿಯ ಮಗಳ ಮನೆಯಲ್ಲಿ ಆಶ್ರಯ ಪಡೆದಿದ್ದರು.
ಆಗಸ್ಟ್ 11ರಂದು ಆಕೆ ಮನೆಗೆ ಹಿಂತಿರುಗಿದಾಗಲೂ ದೌರ್ಜನ್ಯ ಮುಂದುವರೆದಿದೆ. ರಾತ್ರಿ 9.30ರ ಸುಮಾರಿಗೆ, ಆರೋಪಿಯು ತನ್ನ ತಾಯಿಯೊಂದಿಗೆ ಖಾಸಗಿಯಾಗಿ ಮಾತನಾಡಬೇಕೆಂದು ತನ್ನ ಕುಟುಂಬಕ್ಕೆ ಹೇಳಿದ್ದಾನೆ. ಆಗ ಆತ ಮತ್ತೆ ಆಕೆಯನ್ನು ಕೋಣೆಯಲ್ಲಿ ಕೂಡಿ ಹಾಕಿ, ಹಲವು ವರ್ಷಗಳ ಹಿಂದೆ ವಿವಾಹೇತರ ಸಂಬಂಧ ಹೊಂದಿದ್ದಕ್ಕಾಗಿ ವಿಧಿಸುತ್ತಿರುವ ಶಿಕ್ಷೆ ಇದು ಎಂದು ಹೇಳಿ ಅತ್ಯಾಚಾರ ಎಸಗಿದ್ದಾಗಿ ವೃದ್ಧೆ ದೂರಿನಲ್ಲಿ ವಿವರಿಸಿದ್ದಾರೆ.
ಆಗಸ್ಟ್ 14ರಂದು ಬೆಳಗಿನ ಜಾವ 3.30ರ ಸುಮಾರಿಗೆ, ಆರೋಪಿಯು ಆಕೆಯ ಮೇಲೆ ಎರಡನೇ ಬಾರಿ ಅತ್ಯಾಚಾರ ಎಸಗಿದ್ದಾನೆ. ಘಟನೆ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.