ADVERTISEMENT

ಕಾಂಗ್ರೆಸ್‌ ನಾಯಕಿ ಶೀಲಾ ದೀಕ್ಷಿತ್‌ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 20 ಜುಲೈ 2019, 19:49 IST
Last Updated 20 ಜುಲೈ 2019, 19:49 IST
   

ನವದೆಹಲಿ: ಸತತ ಮೂರು ಬಾರಿ ದೆಹಲಿಯ ಮುಖ್ಯಮಂತ್ರಿಯಾಗಿದ್ದ ಕಾಂಗ್ರೆಸ್‌ನ ಹಿರಿಯ ನಾಯಕಿ ಶೀಲಾ ದೀಕ್ಷಿತ್‌ (81) ಅವರು ಇಲ್ಲಿ ಶನಿವಾರ ಮಧ್ಯಾಹ್ನ ನಿಧನರಾದರು.

ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದ ಇವರನ್ನು ಬೆಳಗಿನ ಜಾವ ಇಲ್ಲಿನ ಓಖ್ಲಾದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು. ಭಾನುವಾರ ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಲಿದೆ.

1938ರಲ್ಲಿ ಪಂಜಾಬ್‌ನ ಕಪುರ್ತಲಾದಲ್ಲಿ ಜನಿಸಿದ್ದ ಶೀಲಾ, ಕಾಂಗ್ರೆಸ್‌ನ ಹಿರಿಯ ಮುಖಂಡ ಉಮಾ ಶಂಕರ್ ದೀಕ್ಷಿತ್‌ ಅವರ ಪುತ್ರ,ಐಎಎಸ್‌ ಅಧಿಕಾರಿಯಾಗಿದ್ದ ವಿನೋದ್‌ ದೀಕ್ಷಿತ್‌ ಅವರನ್ನು ಮದುವೆಯಾಗಿದ್ದರು. ಇವರಿಗೆ ಒಬ್ಬ ಪುತ್ರ ಮತ್ತು ಒಬ್ಬ ಪುತ್ರಿ ಇದ್ದಾರೆ.

ADVERTISEMENT

1984ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಕನೌಜ್‌ ಕ್ಷೇತ್ರದಿಂದ ಜಯಿಸಿದ್ದ ಇವರು, ರಾಜೀವ್‌ ಗಾಂಧಿ ಅವರ ಸಂಪುಟದಲ್ಲಿ ಸಂಸದೀಯ ವ್ಯವಹಾರಗಳ ಖಾತೆ ಹಾಗೂ ಪ್ರಧಾನಿ ಕಚೇರಿಯ ರಾಜ್ಯ ಸಚಿವೆಯಾಗಿದ್ದರು.

1998ರಿಂದ 2013ರವರೆಗೆ ದೆಹಲಿಯ ಮುಖ್ಯಮಂತ್ರಿಯಾಗಿದ್ದ ಇವರು, ಕಳೆದ ಜನವರಿಯಲ್ಲಿ ದೆಹಲಿ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷೆಯಾಗಿ ನೇಮಕಗೊಂಡಿದ್ದರು. ಇತ್ತೀಚೆಗೆ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ ಈಶಾನ್ಯ ದೆಹಲಿ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿಯ ಮನೋಜ್‌ ತಿವಾರಿ ವಿರುದ್ಧ ಪರಾಭವಗೊಂಡಿದ್ದರು.

ಇವರ ಆಡಳಿತದ ಅವಧಿಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ದೊರೆತಿತ್ತು. ರಸ್ತೆಗಳು, ಫ್ಲೈಓವರ್‌ಗಳು, ಮೆಟ್ರೋ ರೈಲು ಇವರ ಕೊಡುಗೆ. ಬಡ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸಿದ್ದ ಇವರ ಜನಪ್ರಿಯತೆ ಕಾಂಗ್ರೆಸ್‌ ಪಕ್ಷಕ್ಕೂ ನೆರವಾಗಿತ್ತು.

ಕೇರಳದ ರಾಜ್ಯಪಾಲರಾಗಿಯೂ 2014ರ ಮಾರ್ಚ್‌ನಿಂದ ಐದು ತಿಂಗಳ ಅವಧಿಗೆ ಸೇವೆ ಸಲ್ಲಿಸಿದ್ದ ಇವರನ್ನು ಪಕ್ಷವು 2017ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆ ಸಂದರ್ಭ ಉತ್ತರ ಪ್ರದೇಶ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಿತ್ತು. ಆದರೆ, ಸಮಾಜವಾದಿ ಪಕ್ಷದೊಂದಿಗಿನ ಮೈತ್ರಿಯ ಕಾರಣ ಇವರು ಅನಿವಾರ್ಯವಾಗಿ ಹಿಂದೆ ಸರಿದಿದ್ದರು.

2013ರಲ್ಲಿ ನಡೆದಿದ್ದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ನವದೆಹಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಇವರು ಆಮ್‌ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ಸೋಲನುಭವಿಸಿದ್ದರು.

ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಮುಖಂಡರಾದ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ರಾಹುಲ್‌ ಗಾಂಧಿ, ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್‌ ಮತ್ತಿತರ ಗಣ್ಯರು ಶೀಲಾ ದೀಕ್ಷಿತ್‌ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.